ಸರ್ಕಾರ ಬದುಕಿದ್ಯಾ ? ಅಥವಾ ಸತ್ತೋಗಿದ್ಯ ? -ಹೆಚ್. ವಿಶ್ವನಾಥ್ ಪ್ರಶ್ನೆ

ಮೈಸೂರು: ಸರ್ಕಾರ ಬದುಕಿದ್ಯಾ ? ಅಥವಾ ಸತ್ತೋಗಿದ್ಯ? ಎಂದು ತಮ್ಮ ಸರ್ಕಾರದ ವಿರುದ್ಧವೇ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಶ್ವನಾಥ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮಂಡ್ಯ ಸಂಸದರಾದ ಸುಮಲತಾ ಅವರು ಕೆ.ಆರ್.ಎಸ್. ನಲ್ಲಿ ಬಿರುಕು ಬಿಟ್ಟಿದೆ ಅಂತಾರೆ, ಮಾಜಿ ಸಿಎಂ ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲ ಅಂತಾರೆ. ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಯಾಕೆ ಬೇಕು ಉಸ್ತುವಾರಿ ಮಂತ್ರಿ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಈ ವೇಳೆಗಾಗಲೇ ಮುಖ್ಯಮಂತ್ರಿಗಳು ಟೆಕ್ನಿಕಲ್, ಗಣಿ, ನೀರಾವರಿ ಇಲಾಖೆ ತಂಡವರನ್ನು ಕಳುಹಿಸಿ ಕೆ.ಆರ್.ಎಸ್. ನಲ್ಲಿ ಬಿರುಕು ಬಿಟ್ಟಿದೆಯೂ ಇಲ್ಲೂ ಎಂಬುದರ ಬಗ್ಗೆ ಪರಿಶಿಲಸಿ ಜನತೆಗೆ ತಿಳಿಸಬೇಕಿತ್ತು. ಹೀಗೆ ಮಾಡಿದ್ದರೆ ಜನರಲ್ಲಿನ ಆತಂಕ ಪರಿಹಾರ ಆಗುತ್ತಿತ್ತು ಎಂದರು.

ಹಾಗಾಗಿ ಸರ್ಕಾರದ ಜೀವಂತವಾಗಿದ್ಯೋ ಸತ್ತಿದ್ಯೋ ಎಂದ ಅವರು ಮುಖ್ಯಮಂತ್ರಿ ಕೈಯಲ್ಲಿ ಇಲಾಖೆ ಬಂದು ನಾಲ್ಕೈದು ತಿಂಗಳಾಯ್ತು. ಸಿಎಂ ಕೈಯಲ್ಲಿ ಬಂದ ಇಲಾಖೆಗಳು ಸತ್ತುಹೋಗ್ತವೆ ಎಂದು ವಿಶ್ವನಾಥ್ ಟೀಕಿಸಿದರು.

ಜನರ ನಡುವಿನ ಭಾವನಾತ್ಮಕ ಸಂಕೇತ ಅಂತ ಇಂದು ಉಳಿದಿದ್ದರೆ ಅದು ಕನ್ನಂಬಾಡಿ.

ರಾಜಪ್ರಭುತ್ವದ, ಪ್ರಜೆಗಳ ನಡುವಿನ ಸಂಕೇತ ಕನ್ನಂಬಾಡಿ ಎಂದ ಅವರು ಕನ್ನಂಬಾಡಿ ನಿರ್ಮಾಣವಾಗುವ ವೇಳೆ ಬಹಳಷ್ಟು ತ್ಯಾಗ ನಡೆದಿದೆ. ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನು ಮಾರಿ ಈ ಅಣೆಕಟ್ಟೆಗೆ ದುಡ್ಡು ಕೊಟ್ಟಿದ್ದಾರೆ. ಬೇರೆ ಬೇರೆ ದೇಶದ ಇಂಜಿನಿಯರ್ಸ್, ಸರ್. ಎಂ.ವಿಶ್ವೇರಯ್ಯನವರ ಬುದ್ಧಿಶಕ್ತಿ ಇಲ್ಲಿ ಬಳಕೆಯಾಗಿದೆ. ಕನ್ನಂಬಾಡಿ ಬಿರುಕು ಬಿಟ್ಟಿದೆ ಅನ್ನೋದು ಆತಂಕ ತಂದಿದೆ ಎಂದು ಹೇಳಿದರು.

ರಾಜ ಪ್ರಭುತ್ವದಲ್ಲಿ ಕೆ.ಆರ್.ಎಸ್.ನಿರ್ಮಾಣ ಆಗಿದ್ದಕ್ಕೆ ಬಿರುಕು ಬಿಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದ್ದರೆ ಬಿರುಕು ಬಿಡುತ್ತಿತ್ತೇನೋ ಎಂದರು.