ಮೈಸೂರು: ಲಾಕ್ ಡೌನ್ ವೇಳೆ ಅಪರಾಧ ಪ್ರಕರಣಗಳು ಕಡಿಮೆಯಾಗಿತ್ತು. ಆದರೆ ಅನ್ ಲಾಕ್ ಬಳಿಕ ದರೋಡೆ, ಕಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಲಾಕ್‌ಡೌನ್ ಮುಗಿದ ಬಳಿಕ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಕ್ರೈಂ ರೇಟ್ ಕಡಿಮೆ ಆಗಿತ್ತು. ಆದರೆ ಅನ್ ಲಾಕ್ ಬಳಿಕ ದರೋಡೆ, ಕಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಮೈಸೂರು ನಗರಕ್ಕೆ ಸೀಮಿತವಾಗಿದ್ದ ಸರಗಳ್ಳತನ ಈಗ ಗ್ರಾಮಾಂತರ ಪ್ರದೇಶದಲ್ಲೂ ನಡೆಯುತ್ತಿದೆ ಎಂದರು.
ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ. 50ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ. ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್ ನಲ್ಲಿ ಬರುತ್ತಿವೆ. ಬಹಳ ಸೆಕ್ಯುರಿಟಿಯಲ್ಲಿ ಬರುತ್ತಿದೆ. ಇದನ್ನು ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ಸ್ ಸರಬರಾಜಾಗುತ್ತದೆ ಎಂದರು.
ಸ್ಯಾಂಡಲ್ ವುಡ್ ಡ್ರಗ್ ಕೇಸ್ ಸಂಬಂಧಿಸಿದಂತೆ ವಿದೇಶಿಗರ ಬಂಧನ ವಾಗಿದೆ. ಕಳೆದ ವರ್ಷದಲ್ಲಿ 15ರಿಂದ 20 ಮಂದಿ ಬಂಧನವಾಗಿದೆ. ಈ ಪೈಕಿ ಆಫ್ರಿಕನ್ಸ್ ನವರೇ ಹೆಚ್ಚಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ಮಕ್ಕಳಿಗೆ ಸ್ಕಾಲರ್‌ಶಿಪ್ ಕುರಿತು ಪ್ರತಿಕ್ರಿಯಿಸಿ ಪೊಲೀಸ್ ಮಕ್ಕಳಿಗೆ ಹಿಂದಿನಿಂದಲೂ ಸ್ಕಾಲರ್‌ಶಿಪ್ ವ್ಯವಸ್ಥೆ ಇದೆ. ಈಗ ಇನ್ನಷ್ಟು ಹೆಚ್ಚಿನ ಅನುದಾನ ನೀಡಲು ತೀರ್ಮಾನ ಮಾಡಿದ್ದೇವೆ. ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ಸಿಗಲಿದೆ. ಈ ಯೋಜನೆ ನಿನ್ನೆಯಿಂದ ಆರಂಭ ಆಗಿದೆ. ಪೊಲೀಸರಿಗೆ ವಸತಿ ಗೃಹಗಳ ಸೌಕರ್ಯ ಒದಗಿಸಬೇಕಿದೆ. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹಗಳನ್ನು ಗುರುತಿಸಲಾಗಿದೆ. ರಾಜ್ಯಾದ್ಯಂತ ಸುಮಾರು 100 ಹೊಸ ಕಟ್ಟಡಗಳ ನಿರ್ಮಾಣಕ್ಕೂ ಚಿಂತನೆ ನಡೆಸಿದ್ದೇವೆ ಎಂದರು.
ಕೊರೋನಾ ನಿಯಂತ್ರಣ ವೇಳೆಯಲ್ಲಿ ಇಲಾಖೆಯ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 3ರಿಂದ 4ಸಾವಿರ ಮಂದಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಪೈಕಿ ಎಲ್ಲರ ಆರೋಗ್ಯದ ಕಡೆಗೂ ಗಮನವಹಿಸಲಾಗುತ್ತಿದೆ. ಡೆತ್ ಅದವರ ಸಂಖ್ಯೆ ಕಡಿಮೆ ಇದೆ. ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 30ಲಕ್ಷ ಪರಿಹಾರ ನೀಡಲಾಗುತ್ತಿದೆ. ಪೊಲೀಸರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ವಹಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಲಂಚ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ ಇಂತಹ ಕೆಲಸಕ್ಕೆಲ್ಲ ಇದೀಗ ಕಡಿವಾಣ ಹಾಕಲಾಗುತ್ತಿದೆ. ಇದು ಹಳೆಯ ಪದ್ದತಿ, ಆದರೆ ಇದಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ. ಪೊಲೀಸ್ ಬೋರ್ಡ್ ಬಂದ ಮೇಲೆ ಹಳೆಯ ಮಾದರಿಯ ವರ್ಗಾವಣೆಯಲ್ಲಿ ವ್ಯವಹಾರ ನಡೆಯೋದಿಲ್ಲ ಎಂದರು.
ಸಿಎಂ ರೇಸ್ ಕುರಿತು ಪ್ರತಿಕ್ರಿಯಿಸಿ ನಾನು ಸಿಎಂ ರೇಸ್‌ನಲ್ಲಿ ಇಲ್ಲ. ನಾನು ಈಗ ಹೋಂ ಮಿನಿಸ್ಟರ್ ಹೋಂ ನಲ್ಲಿ ಇದ್ದೇನೆ. ಹೋಂನಲ್ಲೇ ಇರುತ್ತೇನೆ ಇಷ್ಟೇ ಸಾಕು ಎಂದರು.

