ಮೈಸೂರಿನ ಹೋಟೆಲ್ ನಲ್ಲಿ ದಲಿತ ಸಿಬ್ಬಂದಿ ಮೇಲೆ ನಟ ದರ್ಶನ್ ರಿಂದ ಹಲ್ಲೆ: ಚಿತ್ರ ನಿರ್ದೇಶಕ ಇಂದ್ರಜಿತ್ ಆರೋಪ

ಬೆಂಗಳೂರು: ನಟ ದರ್ಶನ್ ಅವರು ಮೈಸೂರಿನ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಚಿತ್ರ ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಇಂದ್ರಜಿತ್ ಲಂಕೇಸ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ದಲಿತ ವ್ಯಕ್ತಿಯ ಮೇಲೆ ಹಲ್ಲೆ ಆಗಿದ್ದರೂ ದರ್ಶನ್ ಮತ್ತವರ ಸಹಚರರ ವಿರುದ್ಧ ಮೈಸೂರು ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲವೆಂದು ಅವರು ಹೇಳಿದರು.

ಮೈಸೂರಿನಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಮೈಸೂರಲ್ಲಿ ಸೆಲಬ್ರಿಟಿಗಳ ನಡವಳಿಕೆ, ಮಾತು ಮಿತಿ ಮೀರುತ್ತಿದೆ. ಸಾಕ್ಷಿಗಳಿದ್ದರೂ ಮೈಸೂರು ಪೊಲೀಸರು ಈ ಘಟನೆ ಸಂಬಂಧ ಯಾರ ಮೇಲೂ ಕ್ರಮ ಕೈಗೊಂಡಿಲ್ಲವೆಂದು ಅವರು ದೂರಿದರು.

ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್ ಮೆಂಟ್ ತಾಣಗಳಾಗುತ್ತಿವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

ಈ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾನು ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ದರ್ಶನ್ ಹಾಗೂ ಇನ್ನು ಕೆಲವರಿಂದ ಅರುಣಾ ಕುಮಾರಿ ಅವರಿಗೆ ಅನ್ಯಾಯ ಆಗಿದೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಅವರು ಒತ್ತಾಯ ಮಾಡಿದರು.