ಹೊಟೇಲ್ ನಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದ್ದು ನಿಜ –ಸಂದೇಶ್

ಮೈಸೂರು: ನಮ್ಮ ಹೊಟೇಲ್ ನಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದ್ದು ನಿಜ. ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆಯಾಗಿಲ್ಲ ಎಂದು ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ತಿಳಿಸಿದ್ದಾರೆ.

ನಟ ದರ್ಶನ್ ನಗರದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಕುರಿತು ಸಂದೇಶ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ನಮ್ಮ ಹೋಟೆಲ್ನಲ್ಲಿ ಸಣ್ಣಪುಟ್ಟ ಗಲಾಟೆ ಆಗಿರುವುದು ನಿಜ. ಲಾಕ್ ಡೌನ್ ಗೂ ನಾಲ್ಕು ದಿನ ಮುಂಚೆ ಈ ಘಟನೆ ನಡೆದಿದ್ದು, ಘಟನೆಯಿಂದ ನಮಗೂ, ನಮ್ಮ ಹೋಟೆಲ್ ಗೂ ತೊಂದರೆಯಾಗಿದೆ. ಹೋಟೆಲ್ ಸಿಬ್ಬಂದಿ ಮಹಾರಾಷ್ಟ್ರ ಮೂಲದ ಟ್ರೈನಿ. ಆತ ಹಿಂದಿಯಲ್ಲಿ ಮಾತನಾಡುತ್ತಿದ್ದ. ಸರ್ವಿಸ್ ವಿಚಾರದಲ್ಲಿ ಮಾತುಕತೆ ನಡೆದಿದೆ. ದರ್ಶನ್ ಸಿಬ್ಬಂದಿಗೆ ಹೊಡೆದಿಲ್ಲ. ದರ್ಶನ್ ಅವರಿಗೆ ನಾನೇ ಬುದ್ದಿ ಹೇಳಿದ್ದೆ ಎಂದು ಸಂದೇಶ್ ತಿಳಿಸಿದರು.

ನಟ ದರ್ಶನ್ ಅವರೊಂದಿಗೆ 15-20 ಮಂದಿ ಹೋಟೆಲ್ಗೆ ಬಂದಿದ್ದರು. ರಾಕೇಶ್ ಪಾಪಣ್ಣ, ಹರ್ಷ, ಪವಿತ್ರ ಗೌಡ ಕೂಡ ಇನ್ನಿತರರ ಜೊತೆ ಬಂದರು ಎಂದು ಸಂದೇಶ್ ಹೇಳಿದರು.

ನನ್ನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ನಾನು ಸುಮ್ಮನೆ ಇರ್ತೀನಾ. ಯಾವ ಹಲ್ಲೆಯೂ ನಡೆದಿಲ್ಲ, ಆದ್ರೆ ಬೈದದ್ದು ನಿಜ. ಎಂದರು.

ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಅಳಿಸಿ ಹಾಕಿಲ್ಲ. ಯಾವುದೇ ದೃಶ್ಯಾವಳಿ 10 ದಿನಗಳ ಹಿಂದಿನದು ಮಾತ್ರ ಸಿಗುತ್ತಿಲ್ಲ. ಒಂದು ತಿಂಗಳ ಹಿಂದೆ ನಡೆದಿರುವ ಘಟನೆಯ ದೃಶ್ಯಾವಳಿ ತಂತಾನೆ ಡಿಲೀಟ್ ಆಗಿದೆ ಎಂದು ಅವರು ಹೇಳಿದರು.