ಮೈಸೂರು:ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರು ರಾಜ್ಯದ ಗದ್ದುಗೆ ಏರಿ, ಹಲವು ಪರಿವರ್ತನೆಗಳಿಗೆ ನಾಂದಿ ಹಾಡಿದ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಜಯಂತ್ಯೋತ್ಸವ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಜಯಂತ್ಯೋತ್ಸವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್ ಮೈಸೂರು ಸಂಸ್ಥಾನದ 22ದೊರೆಗಳಾಗಿ ತಮ್ಮ ರಾಜ್ಯಭಾರವನ್ನು ಸಮರ್ಥವಾಗಿ ನಡೆಸಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು. ಅತ್ಯಂತ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಅವರು ಮಹಾರಾಜರಾಗಿದ್ದರು. 1794ರಲ್ಲಿ ಶ್ರೀರಂಗಪಟ್ಟಣದಲ್ಲಿ ಜನಿಸಿದ ಅವರು 1799ರಲ್ಲಿ ಪಟ್ಟಾಧಿಕಾರವನ್ನು ಪಡೆಯುತ್ತಾರೆ. ಟಿಪ್ಪು ಮರಣಾನಂತರ ಮೈಸೂರು ಸಂಸ್ಥಾನದ ಆಡಳಿತವನ್ನು ಮೈಸೂರು ರಾಜರಿಗೆ ನೀಡಬೇಕೆಂಬ ಇಚ್ಛೆಯಿಂದ ಬ್ರಿಟಿಷರು ಕೊಟ್ಟ ಸಂದರ್ಭದಲ್ಲಿ ಅವರಿಗೆ ಐದು ವರ್ಷಗಳು. ಅವರ ತಾಯಿ ಲಕ್ಷಮ್ಮಮ್ಮಣ್ಣಿ ಮತ್ತು ದಿವಾನ್ ಪೂರ್ಣಯ್ಯನವರ ಸಹಕಾರದೊಂದಿಗೆ ಅವರು ತಮ್ಮ ರಾಜ್ಯಭಾರವನ್ನು ಮುಂದುವರಿಸುತ್ತಾರೆ. ಆನಂತರದಲ್ಲಿ ಅವರು ವಿದ್ಯಾಭ್ಯಾಸ ಮಾಡಿ ತಾಯಿಯ ಮರಣಾನಂತರ ಅಧಿಕಾರ ಮುಂದುವರಿಸುತ್ತಾರೆ. ಇದ್ದಷ್ಟು ದಿನಗಳೂ ಕೂಡ ಸಮರ್ಥವಾಗಿ, ಸಾಹಿತ್ಯಾತ್ಮಕವಾಗಿ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಆಡಳಿತವನ್ನು ನೀಡಿದವರು ಮುಮ್ಮಡಿಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ರಾದ ರೇಣುಕರಾಜ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ನಾಡಪ್ರಭು ಕೆಂಪೇಗೌಡರ ಸಹಕಾರ ಸಂಘದ ಅಧ್ಯಕ್ಷ ಸಿ ಜೆ ಗಂಗಾಧರ್ , ಮಹೇಂದ್ರ ಸಿಂಗ್ ಕಾಳಪ್ಪ ಬನ್ನೂರು , ವಿನಯ್ ಕಣಗಾಲ್ , ನವೀನ್ ಕೆಂಪಿ , ಸುಚೀಂದ್ರ, ಚಕ್ರಪಾಣಿ, ರಾಕೇಶ್ ಕುಂಚಿಟಿಗ, ಪಳನಿ ಇನ್ನಿತರರು ಉಪಸ್ಥಿತರಿದ್ದರು.

