ಪೊಲೀಸ್ ಒಳ್ಳೆಯ ಆಡಳಿತಗಾರರಾಗುವ ಅವಶ್ಯಕತೆ ಇದೆ -ಗೃಹ ಸಚಿವ ಬಸವರಾಜ ಬೊಮ್ಮಾಯಿ

ಮೈಸೂರು: ಬದಲಾಗುತ್ತಿರುವ ಸನ್ನಿವೇಶದಲ್ಲಿ ಪೊಲೀಸ್ ಒಳ್ಳೆಯ ಆಡಳಿತಗಾರರಾಗುವ ಅವಶ್ಯಕತೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿನ ಕೆಪಿಎ ಮೈದಾನದಲ್ಲಿ ಕರ್ನಾಟಕ ಪೊಲೀಸ್ ಅಕಾಡಮಿಯಿಂದ 35ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪಾಧೀಕ್ಷಕರು ಹಾಗೂ ಅಬಕಾರಿ ಉಪಾಧೀಕ್ಷರು ಮತ್ತು 43ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕ ಪ್ರಶಿಕ್ಷಾಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ, ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯ ಬದುಕಿನಲ್ಲಿ ಸಾಧನೆಯ ಮೈಲಿಗಲ್ಲುಗಳನ್ನು ದಾಟುತ್ತಾ ಹೋಗಬೇಕು ಆಗ ಮಾತ್ರ ಬಹಳ ದೊಡ್ಡ ಸಾಧನೆಯಾಗಲಿದೆ. ತಾವೆಲ್ಲ ಸಾಧಕರಾಗಬೇಕೆಂಬುದು ನನ್ನ ಇಚ್ಛೆ. ಯಶಸ್ವಿಯಾಗುವುದು ನಮ್ಮ ಕರ್ತವ್ಯದಿಂದ ಎಂದು ಅವರು ಹೇಳಿದರು.

ನಾವು ಸಾಧನೆಯತ್ತ ತಮ್ಮ ದಾಪುಗಾಲನ್ನು ಹಾಕಬೇಕು. ತಾವು ತಮ್ಮ ಬದುಕಿನಲ್ಲಿ ಒಂದು ಹಂತದ ಯಶಸ್ಸನ್ನು ಕಂಡು ಇಲ್ಲಿ ಉತ್ತಮ ತರಬೇತಿ ಪಡೆದು ತಮ್ಮ ಸರ್ವೀಸ್ ನ್ನು ಪ್ರಾರಂಭಿಸಲಿದ್ದೀರಿ. ನಿಮ್ಮ ಸ್ಲೇಟ್ ಬಹಳ ಸ್ವಚ್ಛವಾಗಿದೆ. ನಿಮ್ಮ ಸ್ಲೇಟ್ ಮೇಲೆ ಏನು ಬರೆಯಬೇಕು ಎನ್ನುವುದು ನಿಮ್ಮ ಕೈಲಿದೆ. ಜಗತ್ತನ್ನು ಗೆಲ್ಲಬಲ್ಲ ಹೊಸ್ತಿಲಲ್ಲಿ ಇದ್ದೀರಿ, ಪ್ರತಿದಿನ ವೃತ್ತಿಯನ್ನು ನೆನಪಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡಿದರೆ ಸಾಧನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ತಿಳಿಸಿದರು.

ಪೊಲೀಸ್ ಒಂದು ವಿಶೇಷವಾಗಿರುವ ವೃತ್ತಿ. ಸಮಾಜದಲ್ಲಿ ಪೊಲೀಸರಿಗೆ ಬಹಳ ಗೌರವವಿದೆ. ಪೊಲೀಸರೆಂದರೆ ಭಯನೂ ಇದೆ. ಪೊಲೀಸ್ ರು ಟೀಕೆಗೂ ಒಳಗಾಗುತ್ತಾರೆ. ಸಂವಿಧಾನ, ಕಾನೂನುನ್ನು ಸರ್ಕಾರ ತಮಗೆ ಕೊಟ್ಟಿದೆ. ನಿಮ್ಮಲ್ಲಿರುವ ಪವರ್ ನ್ನು ಸದುಪಯೋಗ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದರು.

ಹಲವಾರು ಸಂದರ್ಭಗಳಲ್ಲಿ ನಿಮ್ಮ ನಿರ್ಣಯ ತೆಗೆದುಕೊಳ್ಳಲು ನಿಷ್ಠುರವಾಗಿರಬೇಕು. ನ್ಯಾಯದ ಪರವಾಗಿರಬೇಕು ಮತ್ತು ಯಾರೂ ಅನ್ಯಾಯ, ಅತ್ಯಾಚಾರಕ್ಕೆ ಒಳಗಾಗಿದ್ದರೆ ಅವರಿಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.

ಈ ತರಬೇತಿ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಬೇಕು. ನಮ್ಮ ಧ್ಯೇಯ, ಉದ್ದೇಶ ಎಲ್ಲವನ್ನು ಪರಿವರ್ತನೆ ಮಾಡಬೇಕು. ತಮ್ಮ ಕಾರ್ಯಕ್ಷಮತೆ, ಪ್ರಾಮಾಣಿಕತೆ ಜೊತೆಗೆ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಪಡೆಯಬೇಕು. ಅಪರಾಧದದ ಪ್ರಕರಣಗಳಲ್ಲಿ ಬಹಳಷ್ಟು ತಂತ್ರಜ್ಞಾನ ಉಪಯೋಗವಾ ಗುತ್ತದೆ ಎಂದರು.

ಸೈಬರ್ ಕ್ರೈಂ ಹೆಚ್ಚಾಗಿದೆ. ಮಾದಕ ವಸ್ತುಗಳ ಬಳಕೆ, ಸಣ್ಣ ಮಕ್ಕಳ ಮೇಲೆ ತಂತ್ರಾಂಶಗಳ ದುರುಪಯೋಗವಾಗುತ್ತಿದೆ. ಪೊಲೀಸರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಮುಖ್ಯ. ಎಲ್ಲರೂ ವಿಶೇಷ ಶಿಕ್ಷಣ ಪಡೆದವರು ಗೃಹ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಈ ರೀತಿಯ ಶಿಕ್ಷಣದ ಹಿನ್ನೆಲೆಯಲ್ಲಿರುವುದರಿಂದ ಕರ್ತವ್ಯದ ಜೊತೆ ತಂತ್ರಜ್ಞಾನದ ಬಳಕೆ ಸುಲಭವಾಗಿ ಆಗುತ್ತದೆಂದರು.

ಆಧುನಿಕ ಸವಾಲಿಗೆ ತಕ್ಕ ಉತ್ತರ ಕೊಡಲು ತರಬೇತಿಯಿಂದಲೇ ಆರಂಭವಾಗಬೇಕು. ಅಕಾಡೆಮಿಯ ಮುಖ್ಯಸ್ಥರು ಸಂಪೂರ್ಣ ತರಬೇತಿಯನ್ನು ಒಳಾಂಗಣ, ಹೊರಾಂಗಣ ಸಮಿತಿಯನ್ನು ನೇಮಿಸಿ ಅಭ್ಯಾಸ ಮಾಡಿ ವರದಿ ಕೊಟ್ಟರೆ ಸಬಲೀಕರಣ, ಬದಲಾವಣೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ನಮ್ಮ ಮುಂದೆ ಸಾಮಾಜಿಕವಾಗಿ ಸವಾಲಿದೆ. ಹೆಣ್ಣುಮಕ್ಕಳಿಗೆ ಶಕ್ತಿ, ಶೌರ್ಯ, ಧೈರ್ಯ ತುಂಬಿ ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ವಿಶೇಷವಾದ ಕಾರ್ಯಕ್ರಮ ರೂಪಿಸಬೇಕೆಂದು ಕಳೆದೊಂದು ವರ್ಷದಿಂದ ರೂಪಿಸಿ ಕಾರ್ಯಕ್ರಮ ಸಿದ್ಧಪಡಿಸಿದ್ದೇವೆ. ಬರುವ ದಿನಗಳಲ್ಲಿ ಕಾಲೇಜು ಪ್ರಾರಂಭವಾದ ಮೇಲೆ ಶಿಕ್ಷಣ ಇಲಾಖೆಯೊಂದಿಗೆ ಮಾತನಾಡಿ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಬದಲಾಗುತ್ತರುವ ಸನ್ನಿವೇಶದಲ್ಲಿ ಪೊಲೀಸ್ ಒಳ್ಳೆಯ ಆಡಳಿತಗಾರರಾಗುವ ಅವಶ್ಯಕತೆ ಇದೆ. ಎಂಬಿಎ ಮಾದರಿಯಲ್ಲಿ ಆಫೀಸರ್ಸ್ ಟ್ರೇನಿಂಗ್ ಪ್ರೋಗ್ರಾಂ, ಎಲ್ಲ ಆಫೀಸರ್ಸ್ ಗೆ ರೆಗ್ಯುಲರ್ ಟ್ರೇನಿಂಗ್ ನೀಡಲಾಗುತ್ತದೆ. ಇದರ ಜೊತೆಗೆ ನಮ್ಮ ಸರ್ಕಾರ ಬಂದಾಗ 27ಸಾವಿರ ವೆಕೆನ್ಸಿ ಇತ್ತು. ಈಗ ನಾವು ರಿಕ್ರ್ಯೂಟ್ ಮೆಂಟ್ ಪ್ರಾರಂಭಿಸಿದ ಮೇಲೆ 13ಸಾವಿರಕ್ಕೆ ಇಳಿದಿದೆ. 14ಸಾವಿರ ಪೊಲೀಸ್ ಕಾನ್ಸಟೇಬಲ್ ಗಳ ರಿಕ್ರ್ಯೂಟ್ ಮೆಂಟ್ ಮಾಡಿದ್ದೇವೆ. 2022-23ಒಳಗಡೆ ಖಾಲಿ ಇರುವ ಹುದ್ದೆ ಭರ್ತಿ ಮಾಡುವ ಕಾರ್ಯ ನಡೆಯಲಿದೆ. ಅದೇ ರೀತಿ ಪಿಎಸ್ ಐ 2500ಖಾಲಿ ಇತ್ತು. 1000ಕ್ಕಿಂತ ಹೆಚ್ಚು ಭರ್ತಿ ಮಾಡಿದ್ದೇವೆ. 1500ಹುದ್ದೆ ಇದ್ದು, ಈ ವರ್ಷ ಸಾವಿರ ತುಂಬಿ ಮುಂದಿನ ವರ್ಷ 500 ಮಂದಿ ನೇಮಕ ಮಾಡುತ್ತೇ ಎಂದರು.

ಮೈಸೂರು ಪೊಲೀಸ್ ಅಕಾಡೆಮಿ ಬಹಳ ಹೆಚ್ಚಿನ ಮಹತ್ವವಿದೆ. ಗುಣಮಟ್ಟವೂ ಒಳ್ಳೆಯದಿದೆ. ದಕ್ಷ ಅಧಿಕಾರಿಗಳಿದ್ದಾರೆ. ಸೌಲಭ್ಯ ನೀಡುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇವೆ. ನಿಮಗೆ ನೀಡಿದ ತರಬೇತಿಯನ್ನು ಸದುಪಯೋಗ ಮಾಡಿ ಸರ್ಕಾರಕ್ಕೆ, ಸಮಾಜಕ್ಕೆ, ತಮಗೆ, ತಮ್ಮ ಕುಟುಂಬಕ್ಕೆ, ಒಳ್ಳೆಯ ನಾಯಕರಾಗಿ ಕೊಡುಗೆ ನೀಡಿ ಎಂದು ಶುಭ ಹಾರೈಸಿದರು.

ಶಾಸಕರಾದ ರಾಮದಾಸ್, ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರಾದ ಪ್ರವೀಣ್ ಸೂದ್, ಪ್ರಭಾರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ.ಹರಿಶೇಖರನ್ ಮತ್ತು ಪೊಲೀಸ್ ಮಹಾ ನಿರೀಕ್ಷಕರು ಮತ್ತು ನಿರ್ದೇಶಕರಾದ ವಿಫುಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸರ್ವೋತ್ತಮ ಪ್ರಶಿಕ್ಷಣಾರ್ಥಿ ಭೂತೇಗೌಡ ಡಿವೈಎಸ್ಪಿ (ಸಿವಿಲ್) ಮುಖ್ಯಮಂತ್ರಿಗಳ ಟ್ರೋಫಿ(3000 ರೂ.ನಗದು), ಮುಖ್ಯಮಂತ್ರಿಗಳ ಸ್ವೋರ್ಡ್ (2000 ರೂ.) ಡಿಜಿ&ಐಜಿಪಿ ರವರ ಬೇಟನ್ (500 ರೂ.), ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿಯಾಗಿ ಧನ್ಯ ಎನ್. ನಾಯಕ್ ಡಿವೈಎಸ್ ಪಿ (ಸಿವಿಲ್) ಗೃಹ ಮಂತ್ರಿಗಳ ಟ್ರೋಫಿ (3000 ರೂ.) ಪಡೆದರು.

ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಗಜಾನನ ಸುತಾರ್ ಡಿವೈಎಸ್ ಪಿ(ಸಿವಿಲ್), ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಲಕ್ಷ್ಮಿಕಾಂತ್ ಆರ್ ಡಿವೈಎಸ್ಪಿ (ಸಿವಿಲ್), ಉತ್ತಮ ರೈಫಲ್ ಫೈರಿಂಗ್ ಲಕ್ಷ್ಮಿಕಾಂತ್ ಆರ್, ಉತ್ತಮ ರಿವಾಲ್ವರ್ ಫೈರಿಂಗ್ ನಿಖಿತಾ ಜಿ ಡಿವೈಎಸ್ಪಿ (ಸಿವಿಲ್) ಇವರು ಪಡೆದುಕೊಂಡರು. ಡೈರೆಕ್ಟರ್ ಅಸೆಸ್ ಮೆಂಟ್ ಕಪ್ ನ್ನು ಧನ್ಯ ಎನ್ ನಾಯಕ್ ಪಡೆದುಕೊಂಡರು. ಉತ್ತಮ ಹೊರಾಂಗಣ ಮಹಿಳಾ ಪ್ರಶಿಕ್ಷಣಾರ್ಥಿಯಾಗಿ ನಿಖಿತಾ ಜಿ.ಹೊರಹೊಮ್ಮಿದರು.

43ನೇ ತಂಡದಲ್ಲಿ ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಸೋಮನಾಥ್ ಎನ್ ಪಿಎಸ್ ಐ(ಸಿವಿಲ್) ಮುಖ್ಯಮಂತ್ರಿಗಳ ಟ್ರೋಫಿ ಪಡೆದರು.