ಮೈಸೂರು: ಬಿ.ಎಡ್ ಕೋರ್ಸ್ ಸೀಟು ಹೆಚ್ಚಳಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎನ್ ಸಿಐಆರ್ ಟಿ ಗೆ ಮನವಿ ಪತ್ರ ಬರೆಯಲಾಗಿದೆ ಎಂದು ಕುಲಪತಿ ಪ್ರೊ. ವಿದ್ಯಾಶಂಕರ್ ತಿಳಿಸಿದರು.
ಕರಾಮುವಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಸ್ತುತ 500ಮಂದಿಗಷ್ಟೇ ಅವಕಾಶ ನೀಡಲಾಗುತ್ತಿದೆ. ಕರಾಮುವಿ ಎಲ್ಲ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದೆ. ಈ ಹಿನ್ನೆಲೆ ಎನ್ ಸಿಐಆರ್ ಟಿಗೆ ಪತ್ರ ಬರೆಯಲಾಗಿದೆ. ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೀಟು ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. 500 ಸ್ಥಾನದಿಂದ 2000 ಮಂದಿ ವಿದ್ಯಾರ್ಥಿಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಎನ್ ಸಿಐಆರ್ ಟಿ ಒಪ್ಪಿಗೆ ಪಡೆಯುವ ಧನಾತ್ಮಕ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಳ್ಳುತ್ತಿದೆ. 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಹೊಸ ಕಾರ್ಯಕ್ರಮ ಪರಿಚಯಿಸುತ್ತಿದೆ ಎಂದರು.
ಶೈಕ್ಷಣಿಕ ಸೌಲಭ್ಯವುಳ್ಳ 24*7 ಕಾರ್ಯನಿರ್ವಹಿಸುವ ವಸತಿ ಸೌಲಭ್ಯ ಕಟ್ಟಡ ನಿರ್ಮಾಣ ಯೋಜನೆಯಿದ್ದು, ಪ್ರವೇಶಾತಿಯಿಂದ ಫಲಿತಾಂಶದ ವರೆಗೂ ಸಂಪೂರ್ಣ ಗಣಕೀಕರಣವಾಗಿದೆ. ಆನ್ಲೈನ್ ಮೂಲಕ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಯ ತರಬೇತಿ ನೀಡಲಾಗುತ್ತಿದೆ. ಯುಜಿ, ಪಿಜಿ ಜೊತೆಗೆ ಪಿಹೆಚ್ ಡಿ ಕಾರ್ಯಕ್ರಮಗಳ ಅಳವಡಿಕೆ ಮಾಡಲಾಗಿದೆ ಎಂದರು.
ಕೆಎಸ್ಓಯು ನಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 10ಕೋಟಿ ಹಣ ಮೀಸಲಿಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿ ಕ್ಯಾಂಪಸ್ ನಲ್ಲಿ ಕಂಪ್ಯೂಟರ್ ಲ್ಯಾಬ್, ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಹಸ್ತಾಂತರಿಸಲಾಗಿದೆ. ಕೆಎಸ್ ಓಯು ನಿಂದ ಇಂತಹ ಹತ್ತು ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

