ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ; ಭಕ್ತರಿಗಿಲ್ಲ ದೇವಿ ದರ್ಶನ

ಮೈಸೂರು: ಆಷಾಢ ಶುಕ್ರವಾರವಾದ ಇಂದು ನಾಡದೇವತೆ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಿಗೆ ಆಷಾಢ ಮಾಸದ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಿಗ್ಗೆ ಬೆಟ್ಟದಲ್ಲಿನ ದೇವಿ ಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.

ದೇವಾಲಯ ತೆರೆದಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಂಜೆ 6.30ಕ್ಕೆ ದೇವಿಗೆ ಮತ್ತೆ ಅಭಿಷೇಕ ನಡೆಯಲಿದೆ.

ದೇವಾಲಯದ ಒಳಾಂಗಣದಲ್ಲಿ ಪುಷ್ಪಗಳಿಂದ ಅಲಂಕರಿಸಿ ಸಿಂಗಾರ ಮಾಡಲಾಗಿದೆ.

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ಮತ್ತು ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಗಳಿಗೆ ಆಷಾಢ ಶುಕ್ರವಾರ ಸೇರಿದಂತೆ ವಾರಾಂತ್ಯದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.