ಶೀಘ್ರದಲ್ಲೇ 700 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣ -ಬೈರತಿ ಬಸವರಾಜ್

ಮೈಸೂರು: ಇಲವಾಲ ಹೋಬಳಿಯ ಕಮರಹಳ್ಳಿ ಭಾಗದಲ್ಲಿ ರೈತರ ಸಹಕಾರ ಪಡೆದು 50:50ರ ಅನುಪಾತದ 700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಶನಿವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಗಾಗಲೇ 374 ಎಕರೆಯ ಭೂಮಿಯನ್ನು ಪಡೆದುಕೊಂಡಿದ್ದು, ಉಳಿದಿದ್ದನ್ನು ಶೀಘ್ರವಾಗಿ ಪಡೆದುಕೊಳ್ಳಲು ಕ್ರಮವಹಿಸಲಾಗಿದೆ. 15 ದಿನದಲ್ಲಿ ಮತ್ತೆ ಮೈಸೂರಿಗೆ ಭೇಟಿ ನೀಡಿ ಪ್ರತಿಯೊಬ್ಬರ ಸಲಹೆಯನ್ನು ಆಲಿಸಿದ ನಂತರ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿಯೇ ರೈತರ ಸಹಕಾರದೊಂದಿಗೆ 50:50ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಕಬಿನಿಯಿಂದ ಪ್ರಸ್ತುತ 60 ಎಂ.ಎಲ್.ಡಿ ನೀರನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಇನ್ನೂ 90 ಎಂ.ಎಲ್.ಡಿ. ನೀರು ಪಡೆದುಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ 95 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ಇಂದಿನ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸದಾಗಿ ನಿರ್ಮಾಣವಾಗುವ ಬಡಾವಣೆಯಲ್ಲಿ ಪತ್ರಕರ್ತರಿಗೂ ನಿವೇಶನಗಳನ್ನು ಮೀಸಲು ಇರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.