ಮೇಕೆದಾಟು ಯೋಜನೆ ತಕ್ಷಣ ಆರಂಭಿಸಿ: ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು: ಮೇಕೆದಾಟು ಯೋಜನೆ ತಕ್ಷಣ ಆರಂಭಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಗಳೊಂದಿಗೆ ಡಿಕೆಶಿ ಅವರು ಶನಿವಾರ ಸಂಜೆ ಮಾತನಾಡಿದರು.

ಮೇಕೆದಾಟು ಅಣೆಕಟ್ಟೆ ನಮ್ಮ ಪಾಲಿನ ನೀರು ಬಳಸಿಕೊಳ್ಳುವ ಯೋಜನೆ. ಈ ಯೋಜನೆ ಮಾಡಬಾರದು ಎಂದು ಯಾವ ಆದೇಶವೂ ಇಲ್ಲ. ಹೀಗಾಗಿ ಸರ್ಕಾರ ಯೋಜನೆ ಆರಂಭಿಸಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮೇಕೆದಾಟು ಯೋಜನೆಯಿಂದ ಒಂದು ಎಕರೆಯೂ ನೀರಾವರಿ ಆಗುವುದಿಲ್ಲ. ವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ತಮಿಳುನಾಡಿನ ಬಿಜೆಪಿ, ಡಿಎಂಕೆ ಅಥವಾ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ನಮ್ಮ ಮುಖ್ಯಮಂತ್ರಿಗಳು ನೀರಾವರಿ ಸಚಿವರಾಗಿದ್ದವರು. ಅವರಿಗೆ ಈ ಯೋಜನೆ ಬಗ್ಗೆ ಅರಿವಿದೆ. ಅವರು ಯೋಜನೆ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಪರಿಸರ ಇಲಾಖೆ ಅನುಮತಿ ಸಿಕ್ಕಿರುವಾಗ ನಮ್ಮ ಸಿಎಂ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಇತರೆ ಇಲಾಖೆಗಳ ಅನುಮತಿ ಪಡೆದು, ಆದಷ್ಟು ಬೇಗ ಗುದ್ದಲಿ ಪೂಜೆ ಮಾಡಿ, ಕೆಲಸ ಆರಂಭಿಸಲಿ ಎಂದರು.