ಇಡಿ ಬಲೆಯಲ್ಲಿ ಶಾಸಕ ಜಮೀರ್ ಮತ್ತು ಮಾಜಿ ಸಚಿವ ಬೇಗ್

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಐಎಂಎ ಹಗರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಮನೆ ಕಚೇರಿ ಮೇಲೆ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜಮೀರ್ ಮತ್ತು ರೋಷನ್ ಬೇಗ್ ಅವರ ಅರಮನೆಗಳಂಥ ಕಟ್ಟಡಗಳನ್ನು ಮಾಧ್ಯಮಗಳಲ್ಲಿ ಕಂಡ ರಾಜ್ಯದ ಜನರು ಹೌಹಾರಿದರು. ಇಂದ್ರಭವನಗಳನ್ನೇ ನಾಚಿಸುವಂತಿರುವ ಆ ಕಟ್ಟಡಗಳನ್ನು ಕಂಡು ಸ್ವತಃ ಇಡಿ ಅಧಿಕಾರಿಗಳೇ ಚಕಿತರಾದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಆದಾಯ, ಅದಕ್ಕೆ ತಕ್ಕ ತೆರಿಗೆಯನ್ನು ಪಾವತಿ ಮಾಡದಿರುವ ಈ ಇಬ್ಬರು ನಾಯಕರ ಕೆಲ ಅನುಮಾನಾಸ್ಪದ ವ್ಯವಹಾರಗಳು ಇಡಿ ದಾಳಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

ಬೆಳಂಬೆಳಗ್ಗೆಯೇ ಸುಮಾರು 45ಕ್ಕೂ ಹೆಚ್ಚು ಅಧಿಕಾರಿಗಳು 25 ಕಾರುಗಳಲ್ಲಿ ಈ ಇಬ್ಬರು ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಜಮೀರ್ ನಿವಾಸ, ಕಚೇರಿ ಸೇರಿ 6 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೋಷನ್ ಬೇಗ್ ಮನೆಯೂ ಸೇರಿ, ಬೆಂಗಳೂರಿನ ಭೂಪಸಂದ್ರದಲ್ಲಿರುವ ಅವರ ಪುತ್ರಿಯ ಮನೆ ಮತ್ತಿತರ ಕಡೆ ದಾಳಿ ನಡೆದಿದೆ.

ಜಮೀರ್ ಐಶಾರಾಮಿ ಮನೆ ಮೇಲೆ ದಾಳಿ
ಜಮೀರ್ ಅವರ ಒಡೆತನದ ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ರಿಚ್ಮಂಡ್ ಟೌನ್ನಲ್ಲಿರುವ ಐಶಾರಾಮಿ ಮನೆ, ಕಂಟೋನ್ಮೆಂಟ್ ಬಳಿ ಇರುವ ಐಶಾರಾಮಿ ಮನೆ, ಯುಬಿ ಸಿಟಿಯಲ್ಲಿರುವ ಐಶಾರಾಮಿ ಪ್ಲ್ಯಾಟ್ ಸೇರಿ ಒಟ್ಟು 6 ಕಡೆ ಬೆಳಗ್ಗೆ 5.45ರ ಸುಮಾರಿಗೆ ಇಡಿ ಅಧಿಕಾರಿಗಳು ಏಕಕಾಲದಲ್ಲೇ ದಾಳಿ ನಡೆಸಿದ್ದಾರೆ. ದಾಳಿ ನಡೆದಾಗ ಜಮೀರ್ ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.

ದಾಳಿ ಮಾಡಿದ ಎಲ್ಲ ಜಾಗಗಳನ್ನು ಸಂಪೂರ್ಣವಾಗಿ ಶೋಧಿಸಿರುವ ಅಧಿಕಾರಿಗಳು, ಅಪಾರ ಪ್ರಮಾಣದ ದಾಖಲೆ ಪತ್ರಗಳು, ಬ್ಯಾಂಕ್ ಖಾತೆಗಳ ವಿವರಗಳು, ಹಣಕಾಸು ವ್ಯವಹಾರಗಳ ದಾಖಲೆಗಳು, ಭೂ ವ್ಯವಹಾರದ ದಾಖಲೆಗಳು, ಫೊನ್ ಕಾಲ್ಗಳ ವಿವರ ಇತ್ಯಾದಿಗಳನ್ನು ಪರಿಶೀಲನೆ ಮಾಡಿ ಸಾಕಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

90 ಕೋಟಿಯ ಮನೆ 9.38 ಕೋಟಿಗೆ ಮಾರಾಟ
ಬಹುಕೋಟಿ ರೂ.ಗಳ ಐಎಂಎ ಹಗರಣದ ಪ್ರಮುಖ ಆರೋಪಿ ಮನನ್ಸೂರ್ ಖಾನ್ ಜತೆಗಿನ ನಂಟು-ವ್ಯವಹಾರವು ಜಮೀರ್ಗೆ ಮುಳುವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಭಾರೀ ವ್ಯವಹಾರಗಳ ವಾಸನೆ ಇಡಿಗೆ ಬಡಿದಿದ್ದು; ಆಸ್ತಿ, ಚಿನ್ನ ಖರೀದಿ, ಹಣ ವಿನಿಮಯ ಹಾಗೂ ಚುನಾವಣೆ ಸಂದರ್ಭಗಳಲ್ಲಿ ಖರ್ಚು-ವೆಚ್ಚ ಇತ್ಯಾದಿಗಳ ಬಗ್ಗೆ ಅಧಿಕಾರಿಗಳು ತಲಾಶ್ ನಡೆಸಿದ್ದಾರೆ.

ಬಹಳ ಮುಖ್ಯವಾಗಿ ಬೆಂಗಳೂರು ನಗರದ ಅಯಕಟ್ಟಿನ ಜಾಗ ರಿಚ್ಮಂಡ್ ಟೌನ್ನಲ್ಲಿರುವ ಜಮೀರ್ ಅಹಮದ್ ಐಶಾರಾಮಿ ಭಂಗಲೆಯು ಸರಕಾರ ನಿಗದಿ ಮಾಡಿದ ಮಾರುಕಟ್ಟೆ ಮೌಲ್ಯದ ಪ್ರಕಾರ 90 ಕೋಟಿ ರೂ.ಗಳಿಗೂ ಹೆಚ್ಚು ಬೆಲೆ ಬಾಳಲಿದ್ದು, ಅದನ್ನು ಜಮೀರ್ ಕೇವಲ 9.38 ಕೋಟಿ ರೂ.ಗಳಿಗೆ ಮನ್ಸೂರ್ ಖಾನ್ಗೆ ಮಾರಿದ್ದಾರೆಂದು, ಇದರಲ್ಲಿ ಅಪಾರ ಪ್ರಮಾಣದ ಆಸ್ತಿ ತೆರಿಗೆ ವಂಚಿಸಲಾಗಿದೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ನಾಯಕ ಎನ್.ಆರ್.ರಮೇಶ್ ಈ ಬಗ್ಗೆ ದಾಖಲೆಗಳ ಸಮೇತ ಆರೋಪ ಮಾಡಿ ತನಿಖೆಗೆ ಒತ್ತಾಯ ಮಾಡಿದ್ದರು. ಇದಲ್ಲದೆ ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಹಾಗೂ ಕೆಲ ದೇಶಗಳಲ್ಲಿ ಜಮೀರ್ ಹೂಡಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೇಗ್ ಮನೆ ಮೇಲೆ ದಾಳಿ
ಜಮೀರ್ ಜತೆಯಲ್ಲೇ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆದಿದ್ದಾರೆ.

ಐಎಂಎ ವಂಚನೆ ಪ್ರಕರಣ ಸಂಬಂಧ ಬೇಗ್ ಮನೆ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಏಕಕಾಲದಲ್ಲಿ ಒಟ್ಟು 6 ಕಡೆ ದಾಳಿ ನಡೆಸಲಾಗಿದೆ.

ಬೆಳಗ್ಗೆ 7 ಗಂಟೆ ಹೊತ್ತಿಗೆ ಶಿವಾಜಿನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಐಎಂಎ ಹಗರಣದಲ್ಲಿ ಅವರು ಆ ಕಂಪನಿಯಿಂದ 400 ಕೋಟಿ ರೂ. ಪಡೆದಿದ್ದರೆಂಬ ಆರೋಪ ಇದೆ.

ನಗರದ ಫ್ರೇಜರ್ʼಟೌನ್ʼನಲ್ಲಿರುವ ರೋಷನ್ ಬೇಗ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಈ ಮನೆಯಲ್ಲಿ 8ರಿಂದ10 ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಜತೆಗೆ, ವಿದೇಶಗಳಲ್ಲಿ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿದ ಅನುಮಾನವೂ ಇಡಿ ಅಧಿಕಾರಿಗಳಿಗೆ ಇದ್ದು, ಆ ನಿಟ್ಟಿನಲ್ಲೂ ಶೋಧ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ.

ಇದೇ ವೇಳೆ ಬೇಗ್ ಅವರ ಪುತ್ರಿ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಗೂ ಮುನ್ನ ಭಾರೀ ಸಿದ್ಧತೆ
ಅತ್ಯಂತ ಮಹತ್ವದ್ದಾಗಿರುವ ಈ ದಾಳಿ ನಡೆಸುವ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರೀ ಸಿದ್ಧತೆ ನಡೆಸಿದ್ದಾರೆ.

ವಾರಕ್ಕೆ ಮೊದಲೇ ಬಂದು ಬೆಂಗಳೂರಿನ ಖಾಸಗಿ ಹೋಟಲ್ ನಲ್ಲಿ ಪ್ರವಾಸಿಗರಂತೆ, ಖಾಸಗಿ ಕಂಪನಿ ಉದ್ಯೋಗಿಗಳಂತೆ ಯಾರಿಗೂ ಅನುಮಾನ ಬಾರದಂತೆ ಮೊಕ್ಕಾಂ ಹೂಡಿದ್ದ 45 ಅಧಿಕಾರಿಗಳು, ಆ ಮೊದಲೇ ಸಂಗ್ರಹಿಸಿದ್ದ ಮಾಹಿತಿಯಂತೆ ವ್ಯಾಪಕ ಕಾರ್ಯಾಚರಣೆ ಮಾಡಿದ್ದರು.

ಜಮೀರ್, ರೋಷನ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿಯ ಮಹೂರ್ತ ಫಿಕ್ಸ್ ಮಾಡಿದ್ದರು. ದಾಳಿ ವೇಳೆ ಇಬ್ಬರೂ ನಾಯಕರೂ ಅವರವರ ಮನೆಗಳಲ್ಲೇ ಇದ್ದರು.