ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು? -ಡಿ.ಕೆ. ಶಿವಕುಮಾರ್ ಪ್ರಶ್ನೆ

ನವದೆಹಲಿ: ಆಪರೇಷನ್ ಕಮಲ, ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಬಿಜೆಪಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು? ಬಿಜೆಪಿಯವರ ವ್ಯವಹಾರಗಳೆಲ್ಲಾ ಸರಿಯಾಗಿದ್ದಾವಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.

ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಡಿಕೆ ಶಿವಕುಮಾರ್ ಅವರು ಮಾತನಾಡಿದರು.

ನಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ ಅವರ ಮನೆ, ಕಚೇರಿ ಮೇಲಿನ ಇ.ಡಿ. ದಾಳಿ ಖಂಡನೀಯ. ಕಾನೂನು ಪ್ರಕಾರ ಅದನ್ನು ಎದುರಿಸಲು ಜಮೀರ್ ಅವರು ಸಮರ್ಥರಿದ್ದಾರೆ. ಎರಡು ವರ್ಷಗಳ ಹಿಂದೆ ಇ.ಡಿ. ಅಧಿಕಾರಿಗಳು ಜಮೀರ್ ಅವರಿಗೆ ನೋಟೀಸ್ ಜಾರಿ ಮಾಡಿ, ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿ ಜಮೀರ್ ಅವರೇ ನನಗೆ ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ದಾಳಿ ಅಗತ್ಯ ಇರಲಿಲ್ಲ ಎಂದರು.

ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಸಿಬಿ ನಿಜಕ್ಕೂ ಕಾರ್ಯಪ್ರವೃತ್ತವಾಗಿದ್ದರೆ, ಮಾಜಿ ಸಚಿವ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಅವರು 30 ಕೋಟಿ ಹಣದ ಆಮಿಷ ನೀಡಿ, 5 ಕೋಟಿ ಹಣವನ್ನು ನನ್ನ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆರೋಪ ಮಾಡಿದಾಗ ಈ ಇಲಾಖೆಗಳು ಎಲ್ಲಿ ಹೋಗಿದ್ದವು ಎಂದು ಡಿಕೆಶಿ ಪ್ರಶ್ನಿಸಿದರು.

ಯಾರ್ಯಾರ ಅನುಕೂಲಕ್ಕೆ ಹೇಗೆ ಬೇಕೋ, ಹಾಗೆ ಈ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅಧಿಕಾರ ಇದೆ ಎಂದು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ಆದರೆ ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನು ಎಷ್ಟು ಸರಿ? ಬಿಜೆಪಿಯವರೆಲ್ಲಾ ಬಹಳ ಸಾಚಾತನದಲ್ಲಿ ವ್ಯವಹಾರ ಮಾಡುತ್ತಿದ್ದಾರಾ? ಎಂದರು.

ಕಮಲ್ ನಾಥ್ ಜತೆ ಚರ್ಚೆ
ಕಮಲ್ ನಾಥ್ ಅವರು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕೋವಿಡ್ ಸಾವು-ನೋವುಗಳ ಬಗ್ಗೆ ಮಧ್ಯಪ್ರದೇಶದಲ್ಲಿಯೂ ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದ್ದು, ಇತರ ವಿಚಾರಗಳ ಬಗ್ಗೆಯೂ ನಾವು ಚರ್ಚೆ ಮಾಡಿದೆವು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಇನ್ನು ನೂರು ವರ್ಷವಾದ್ರೂ ತಮಿಳುನಾಡು ಅನುಮತಿ ನೀಡಲ್ಲ
ಮೇಕೆದಾಟು ಯೋಜನೆ ರಾಜಕೀಯ ಇಚ್ಛಾಶಕ್ತಿ ವಿಚಾರ. ನಮ್ಮ ರಾಜ್ಯದಲ್ಲಿ ನಮ್ಮ ಹಣದಲ್ಲಿ ನಮ್ಮ ನೀರನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸುತ್ತಿದ್ದೇವೆ. ನಾವು ಯಾರ ಪಾಲಿನ ನೀರನ್ನೂ ತಡೆಯುತ್ತಿಲ್ಲ. ಈ ವಿಚಾರದಲ್ಲಿ ತಮಿಳುನಾಡು ಇವತ್ತಲ್ಲ ಇನ್ನೂ ನೂರು ವರ್ಷವಾದರೂ ಅನುಮತಿ ನೀಡುವುದಿಲ್ಲ. ತಮಿಳುನಾಡಿನವರು ಏನಾದರೂ ಮಾಡಿಕೊಳ್ಳಲಿ. ಆದರೆ ಇಲ್ಲಿ ಆಡಳಿತ ಮಾಡುತ್ತಿರುವವರು ಏನು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು.