ಮಹಾರಾಣಿ ಮಹಿಳಾ ವಾಣೀಜ್ಯ ಪದವಿ ಕಾಲೇಜು ವಿದ್ಯಾರ್ಥಿನಿಯರ ಅನುಕೂಲಕ್ಕೆಹೆಚ್ಚುವರಿ ಬಸ್ ವ್ಯವಸ್ಥೆಗೆ ಆಗ್ರಹ

ಮೈಸೂರು: ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣೀಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಅನೂಕೂಲಕ್ಕೆ ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಜೀವಧಾರ ಪದವಿಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ ಆಗ್ರಹಿಸಿದ್ದಾರೆ

ಬೆಳಗ್ಗಿನ ತರಗತಿ ಪ್ರಾರಂಭದ ಸಮಯ ಮತ್ತು ಮಧ್ಯಾಹ್ನದ ತರಗತಿ ಮುಗಿಯುವ ಸಮಯಕ್ಕನುಗುಣವಾಗಿ ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಮಾಡಲು ಕೆ.ಎಸ್.ಆರ್.ಟಿ.ಸಿ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಬೇಕೆಂದು ವರಲಕ್ಷ್ಮಿ ಒತ್ತಾಯಿಸಿದ್ದಾರೆ.

ಅತಿಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪದವಿ ಕಾಲೇಜು ಎಂದು ಪ್ರಖ್ಯಾತವಾಗಿರುವ ಮಹಾರಾಣಿ ಪದವಿ ಕಾಲೇಜಿನಲ್ಲಿ 3800 ವಿದ್ಯಾರ್ಥಿನಿಯರಿದ್ದಾರೆ. ಗ್ರಾಮಾಂತರ ಪ್ರದೇಶ ಮತ್ತು ನಗರದ ವಿವಿಧ ಬಡಾವಣೆಗಳಿಂದ ಕಾಲೇಜಿಗೆ ಪ್ರತಿನಿತ್ಯ ಬಸ್ ನಲ್ಲಿ ವಿದ್ಯಾರ್ಥಿನಿಯರು ಆಗಮಿಸುತ್ತಾರೆ. ಕಾಲೇಜು ಮುಂಭಾಗವೇ ಬಸ್ ನಿಲ್ದಾಣವಿದ್ದರೂ ಸರಿಯಾದ ಸಮಯಕ್ಕೆ ಬಸ್ ಸಂಚರಿಸದ ಕಾರಣ ಸಾವಿರಾರು ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಕೆ.ಆರ್ ಎಸ್, ಹುಣಸೂರು ರಸ್ತೆ ಮತ್ತು ನಗರ ಬಸ್ ನಿಲ್ದಾಣದಿಂದ ಆಗಮಿಸುವ ಬಸ್ ಗಳಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಬೆಳಗಿನ ಹೊತ್ತು ಬರುತ್ತಾರೆ. ಆಕಾಶವಾಣಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರು ಇಳಿದು ಕಾಲೇಜಿನವರೆಗೆ 1ಕಿಲೋಮೀಟರ್ ನಡೆದುಕೊಂಡು ಬರುತ್ತಿರುವ ವಾತಾವರಣ ಉಂಟಾಗಿದೆ. ಸಾವಿರಾರು ವಿದ್ಯಾರ್ಥಿನಿಯರು ಸರಿಯಾದ ಸಮಯಕ್ಕೆ ತರಗತಿಗೆ ಆಗಮಿಸಲು ನಗರ ಬಸ್ ಸಾರಿಗೆ ವಿಭಾಗದ ಅಧಿಕಾರಿಗಳು ಮತ್ತು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳು ಮುಂದಾಗಲಿ ಎಂದು ಜೀವಧಾರ ಪದವಿಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ ರವರು ವಿದ್ಯಾರ್ಥಿನಿಯರ ಪರವಾಗಿ ಆಗ್ರಹಿಸಿದ್ದಾರೆ.