ಮೈಸೂರು: ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಘೋಷಣೆ ಮಾಡಿದ್ದಾರೆ.
ಸಂಸದ ಶ್ರೀನಿವಾಸ್ ಪ್ರಸಾದ್ ರ 75ನೇ ವರ್ಷದ ಹುಟ್ಟಹಬ್ಬವಾಗಿದ್ದು, ಮೈಸೂರಿನಲ್ಲಿ ಶುಕ್ರವಾರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
50 ವರ್ಷದ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗುತ್ತಿದೆ. ಇದರಲ್ಲಿ ನನ್ನ ರಾಜಕೀಯ ಜೀವನದ ಎಲ್ಲ ಏಳು ಬೀಳು ದಾಖಲಿಸಿದ್ದೇನೆ. ನಾನು ಆತ್ಮ ತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ಹೇಳಿದರು.
ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಮತ್ತೆ ಸ್ಪರ್ಧೆ ಮಾಡಿದ್ದೆ. ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ಹಿಂದೆ ಸರಿಯುವುದು ಇಲ್ಲ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

