ಮೈಸೂರಿನ ಪ್ರವಾಸಿ ತಾಣಗಳ ಬಂದ್ ಕುರಿತ ಶನಿವಾರ ಅಂತಿಮ ನಿರ್ಧಾರ -ಸಚಿವ ಎಸ್.ಟಿ ಸೋಮಶೇಖರ್

ಮೈಸೂರು: ಕೋವಿಡ್ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳ ಬಂದ್ ಮಾಡುವ ಕುರಿತು ಶನಿವಾರ (ಆ. 7) ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮೈಸೂರಿನ ಪ್ರವಾಸಿ ತಾಣಗಳ ಬಂದ್ ಮಾಡುವ ಸಂಬಂಧ ಶನಿವಾರ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಡಳಿಕ್ಕೆ ಸೂಚಿಸಿದ್ದೇನೆ. ವರದಿ ಪಡೆದು ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದರು.

ಸಾರ್ವಜನಿಕರಿಗೂ, ವ್ಯಾಪಾರಸ್ಥರಿಗೂ, ಪ್ರವಾಸಿಗಳಿಗೂ ಅನಾನುಕೂಲ ಆಗದಂತೆ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವ ಸೋಮಶೇಖರ್ ಹೇಳಿದರು.

ರಾಜಕೀಯ ದಾಳಿ ಅಲ್ಲ
ಶಾಸಕ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವರಾದ ರೋಷನ್ ಬೇಗ್ ಅವರ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ
ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೊಟ್ಟರೆ ಸಮಸ್ಯೆಯಾಗುವುದಿಲ್ಲ ಎಂದರು.

ಇನ್ನು ಈ ದಾಳಿಯನ್ನು ಬಿಜೆಪಿ ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪದಲ್ಲಿ ಹುರುಳಿಲ್ಲ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ಕೊಡುತ್ತಿರುವ ಸಿದ್ದರಾಮಯ್ಯ ಅವರ ಬಗ್ಗೆ ಡಿ.ಕೆ.ಶಿವಕುಮಾರ್ ಗೆ ಅಸಮಾಧಾನವಿರಬಹುದು. ಹಾಗಾಗಿ ಅವರ ಆಪ್ತರ ಮನೆ ಮೇಲೆ ಡಿಕೆಶಿಯವರೇ ಮಾಹಿತಿ ಕೊಟ್ಟು ದಾಳಿ ಮಾಡಿಸಿರಬಹುದು ಎಂದು ಪ್ರಶ್ನೆಯೊಂದಕ್ಕೆ ಸಚಿವ ಸೋಮಶೇಖರ್ ಉತ್ತರಿಸಿದರು.

ಯಾವ ಖಾತೆ ಕೊಟ್ಟರೂ ಸರಿ
ಸಹಕಾರ ಖಾತೆಯನ್ನೇ ಕೇಳಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್. ಟಿ. ಸೋಮಶೇಖರ್, ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಲಾಬಿ ಮಾಡಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆ ಹಿನ್ನೆಲೆಯಲ್ಲಿ ಈಗ ಸಚಿವ ಸ್ಥಾನ ನೀಡಿದ್ದಾರೆ. ಇಂಥದ್ದೇ ಖಾತೆ ಕೊಡಿ ಎಂದು ನಾನು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಒಂದು ವೇಳೆ, ನನ್ನನ್ನೇ ಕೇಳಿದರೆ ಬೆಂಗಳೂರು ಅಭಿವೃದ್ಧಿ ಖಾತೆ ಕೇಳುತ್ತೇನೆ. ಉಸ್ತುವಾರಿ ಜಿಲ್ಲೆ ಕೇಳಿದರೆ ಬೆಂಗಳೂರು ಜಿಲ್ಲೆಯನ್ನು ಕೇಳುತ್ತೇನೆ ಎಂದು ಹೇಳಿದರು.