ಖಾತೆ ಅಸಮಾಧಾನವನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರು ಶಮನಗೊಳಿಸಲಿದ್ದಾರೆ -ಗೃಹಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಖಾತೆ ಅಸಮಾಧಾನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಶಮನಗೊಳಿಸಲಿದ್ದಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗೃಹ ಸಚಿವರು ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಎಲ್ಲರಿಗೂ ಅವರ ಅಪೇಕ್ಷೆಯಂತೆ ಖಾತೆ ಹಂಚುವುದು ಕಷ್ಟಸಾಧ್ಯ. ಖಾತೆ ವಿಚಾರದಲ್ಲಿ ಅಸಮಾಧಾನಗೊಂಡಿರುವವರನ್ನು ಮುಖ್ಯಮಂತ್ರಿ ಅವರು ಸಮಾಧಾನ ಮಾಡುತ್ತಾರೆ ಎಂದು ಹೇಳಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡವು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ನಾಡಿನಲ್ಲಿ ವಿಚ್ಛಿದ್ರಕಾರಕ ಶಕ್ತಿ ತಲೆಯೆತ್ತಲು ಬಿಡುವುದಿಲ್ಲ ಪೋಲೀಸರನ್ನು ಅಲರ್ಟ್ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಂಗ್ಲಾದಿಂದ ಬಂದು ಇಲ್ಲಿ ನೆಲೆಸಿದ್ದಾರೆ ಅಂತವರ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅಸ್ಸಾಂನಲ್ಲಿ ದಾಖಲೆ ಸೃಷ್ಟಿಸಿ ಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ. ದಾಖಲೆಗಳ ಅಸಲಿಯತ್ತು ಪರಿಶೀಲಿಸುವಂತೆ ತಿಳಿಸಿದ್ದೇನೆ ಎಂದು ಮತ್ತೊಂದು ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದರು.

ಪ್ರಥಮ ಬಾರಿಗೆ ಸಚಿವನಾಗಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ ದಿನವೇ ಗೃಹ ಸಚಿವ ಖಾತೆ ಒಲಿದಿದೆ ಇದನ್ನು ಎಂದೂ ಮರೆಯುವುದಿಲ್ಲ ಎಂದವರು ತಿಳಿಸಿದರು.

ಮಲೆನಾಡು ಭಾಗದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿರುವ ಬಗ್ಗೆ ನನ್ನ ಗಮನದಲ್ಲಿದೆ. ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಇಲಾಖೆಯ ಸುಧಾರಣೆ ಬಗ್ಗೆ ನನ್ನ ಮನಸ್ಸಿನಲ್ಲಿ ಅನೇಕ ಸಂಗತಿಗಳಿವೆ. ನಾನು ಪೊಲೀಸ್ ಆಗದೇ ಇದ್ದರೂ ಸಾರ್ವಜನಿಕರು ಪೊಲೀಸರಿಂದ ಏನು ಅಪೇಕ್ಷೆ ಪಡುತ್ತಾರೆ ಎಂಬುದು ನನಗೆ ಗೊತ್ತಿದೆ. ಅಂತಹ ಅಪೇಕ್ಷೆಗಳು ನನಗೂ ಇದೆ ಖಂಡಿತವಾಗಿಯೂ ಪರಿಶೀಲಿಸುತ್ತೇನೆ ಎಂದವರು ತಿಳಿಸಿದರು.