ಮೈಸೂರು: ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಮೊದಲಿನಿಂದಲೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿಎಂ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತಮಿಳುನಾಡಿನವರು ಸದಾಕಾಲ ರಾಜಕಾರಣ ಮಾಡುತ್ತಾರೆ. ಕಾವೇರಿ ನದಿ ನೀರು ಹಂಚಿಕೆಯ ವಿಚಾರ ಮುಂದಿಟ್ಟುಕೊಂಡು ಎಷ್ಟೋ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ ಎಂದು ಸಿಎಂ ಹೇಳಿದರು.
ತಮಿಳುನಾಡಿನವರು ಏನೇ ಹೇಳಿದರು ನಾವು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ. ಕಾವೇರಿ ಕೊಳ್ಳದಲ್ಲಿ ಲಭ್ಯವಾಗುವ ಗರಿಷ್ಠ ಪ್ರಮಾಣದ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಮೇಕೆದಾಟುವಿನಲ್ಲಿ ನಮ್ಮ ನೀರಿನ ಹಕ್ಕು ಏನಿದೆ ಅದನ್ನು ಪಡೆದುಕೊಂಡು ಆದಷ್ಟು ಬೇಗನೆ ಈ ಯೋಜನೆಗೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನ ಭೇಟಿ ಮಾಡುತ್ತೇನೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕಾನೂನಾತ್ಮಕವಾಗಿ ನಮಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುತ್ತೇನೆ. ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸುತ್ತೇನೆ. ನಮ್ಮ ನೀರು ನಮ್ಮ ಹಕ್ಕು ಅದನ್ನು ಪಡೆದುಕೊಳ್ಳುತ್ತೇನೆ. ನದಿಯ ನೀರಿನಿಂದ ರೈತರಿಗೆ ಅನುಕೂಲವಾಗುವುದನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕೇ ವಿನಃ ರಾಜಕಾರಣವಲ್ಲ. ನೀರಾವರಿ ಸಚಿವರ ಜೊತೆ ಸಭೆ ಮಾಡಿ ಕೂಡಲೇ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಸಮಾಧಾನಗೊಂಡಿದ್ದ ಸಚಿವರ ಕುರಿತು ಪ್ರತಿಕ್ರಿಯಿಸಿ ಆನಂದ ಸಿಂಗ್ ಬಂದಿದ್ದರು ಮಾತನಾಡಿದ್ದೇನೆ, ಸಮಾಧಾನಗೊಂಡಿದ್ದಾರೆ. ಯಾವುದೇ ಗೊಂದಲವಿಲ್ಲ ಎಂದು ಸಿಎಂ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಂಪುಟ ದರ್ಜೆ ಅಧಿಕಾರ ಬೇಡವೆಂದು ಹೇಳಿದ್ದಾರೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಿಕಟಪೂರ್ವ ಮುಖ್ಯಮಂತ್ರಿಗಳಿಗೇನು ಸೌಲಭ್ಯವಿದೆಯೋ ಅದನ್ನು ಮುಂದುವರಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ ಸಿಎಂ, ಮಹಾರಾಷ್ಟ್ರ ಮತ್ತು ಕೇರಳ ಗಡಿಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಪಡೆಯಲು ಬಂದಿದ್ದೇನೆ. ಮುಂದಿನ ವಾರದೊಳಗೆ ಎಲ್ಲ ಗಡಿ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ, ತೀವ್ರತೆಯನ್ನು ನೋಡಿ ತೀರ್ಮಾನವನ್ನು ಮಾಡುತ್ತೇವೆ ಎಂದರು.
ವೀಕೆಂಡ್ ಕರ್ಫ್ಯೂ ಕುರಿತಂತೆ ರಾಜ್ಯಮಟ್ಟದಲ್ಲಿ ಹಲವು ನಿರ್ಧಾರ ಮಾಡಿದ್ದೇವೆ. ಜನರ ಹಿತಕ್ಕೋಸ್ಕರವಾಗಿಯೇ ಇವೆಲ್ಲ ಮಾಡಿರೋದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಕೋವಿಡ್ ನಿಯಂತ್ರಣ ಕ್ರಮಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ಅವರು ಹೇಳಿದರು.
ಶಾಸಕ ರಾಮದಾಸ್ ಗೈರು
ಶಾಸಕ ರಾಮದಾಸ್ ಅವರು ಇಂದು ಗೈರು ಹಾಗರಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಉತ್ತರಿಸಿ, ರಾಮದಾಸ್ ಅವರ ಬಗ್ಗೆ ಹೇಳುವುದಾದರೆ, ಅವರು ನನ್ನ ಆತ್ಮೀಯ ಸ್ನೇಹಿತರು. ಸಂಪುಟ ರಚನೆ ಪ್ರಕ್ರಿಯೆ ನಡೆದಿದ್ದಾಗಲೂ ನಾನು ಅವರ ಸಂಪರ್ಕದಲ್ಲಿದ್ದೆ. ಅವರ ಜತೆ ಮಾತನಾಡುತ್ತೇನೆ. ಅವರಿಗೂ ಹಲಾವರು ವಿಷಯಗಳು ಗೊತ್ತಿವೆ. ಯಾವ ರೀತಿ ಈ ಸರಕಾರ ಬಂದಿದೆ, ಹೇಗೆಲ್ಲ ಸಂಪುಟ ರಚನೆ ಆಗಿದೆ ಎನ್ನುವ ಮಾಹಿತಿ ಅವರಿಗೂ ಇದೆ. ವಿಶೇಷವಾದ ಸಂದರ್ಭದಲ್ಲಿ ಸರಕಾರ ಬಂದಿದೆ. ಅವರು ಹಿರಿಯ ರಾಜಕಾರಣಿ, ಹಳಬರು, ಪಕ್ಷದಲ್ಲಿ ನನಗಿಂತ ಮೊದಲಿನಿಂದ ಇದ್ದು ಕೆಲಸ ಮಾಡಿದ್ದಾರೆ. ಅವರೊಂದಿಗೆ ನಾನೇ ಖುದ್ದು ಮಾತನಾಡುತ್ತೇನೆ ಎಂದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿದೇವಿ ದರ್ಶನ ಪಡೆದರು.
ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಶಾಸಕ ಎಸ್.ಎ ರಾಮದಾಸ್ ಗೈರಾಗಿದ್ದರು.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಎಸ್.ಎ.ರಾಮದಾಸ್ ಸಿಎಂ ಬೊಮ್ಮಾಯಿ ಅವರನ್ನ ಸ್ವಾಗತಿಸಲು ಚಾಮುಂಡಿ ಬೆಟ್ಟಕ್ಕೆ ಬಂದಿರಲಿಲ್ಲ. ಹೀಗಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಮುನಿಸಿಕೊಂಡರೇ ಎಂಬ ಪ್ರಶ್ನೆ ಉಂಟಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೈಸೂರಿಗೆ ಮೊದಲ ಬಾರಿಗೆ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕೆಂದು ಬಹಳ ಇಚ್ಛೆ ಇತ್ತು. ಕಳೆದ ಬಾರಿಯೂ ಕೂಡ ಬಂದಾಗ ತಾಯಿಯ ಆಶೀರ್ವಾದ ಪಡೆದಿದ್ದೆ. ರಾಜ್ಯದಲ್ಲಿ ಸುಭಿಕ್ಷೆಯಿರಲಿ, ಮಳೆ ಬೆಳೆ ಚೆನ್ನಾಗಿರಲಿ, ನಾಡಿನ ಜನ ಸುಖ ಸಂತೋಷದಿಂದಿರಲಿ, ರಾಜ್ಯದಿಂದ ಕೊರೊನಾ ವ್ಯಾಧಿ ತೊಲಗಲಿ, ರಾಜ್ಯ ಕೊರೊನಾ ಮುಕ್ತವಾಗಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಿಎಂ ಹೇಳಿದರು.
ಮೈಸೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿಗೆ ಮುಜರಾಯಿ ಇಲಾಖೆ ಪೂರ್ಣಕುಂಭ ಸ್ವಾಗತಿಸಲಾಯಿತು.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಸಚಿವರುಗಳಾದ ಎಸ್.ಟಿ.ಸೋಮಶೇಖರ್, ಡಾ. ಕೆ. ಸುಧಾಕರ್, ಭೈರತಿ ಬಸವರಾಜು, ಕೆ.ಸಿ.ನಾರಾಯಣಗೌಡ, ವಿ.ಸೋಮಣ್ಣ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ಶಾಸಕರಾದ ನಾಗೇಂದ್ರ, ಜಿ.ಟಿ.ದೇವೇಗೌಡ, ರೇಣುಕಾಚಾರ್ಯ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

