ಮೈಸೂರು: ಶೀಘ್ರವೇ ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕಚೇರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಏರ್ಪಡಿಲಾಗಿದ್ದ 75 ನೆಯ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜರೋಹಣ ನೆರವೇರಿಸಿ ಸಚಿವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಬೆಂಗಳೂರು ವ್ಯಾಪ್ತಿಯಾಚೆಗೆ ವಿಸ್ತರಿಸುವುದಕ್ಕಾಗಿ ಸರ್ಕಾರ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಅಡಿಯಲ್ಲಿ ಮೈಸೂರು ವಲಯವನ್ನು ಆದ್ಯತಾ ಕ್ಲಸ್ಟರ್ ಆಗಿ ಗುರುತಿಸಲಾಗಿದೆ ಎಂದು ತಿಳಿಸಿದರು.
‘ಇರುವಲ್ಲಿಂದಲೇ ಕೆಲಸ ‘ ಎಂಬುದು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಮೈಸೂರು ವಲಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಬೆಳವಣಿಗೆಗೆ ನಮ್ಮ ಸರ್ಕಾರ ಗಮನ ಕೊಟ್ಟಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಜಾಗತಿಕವಾಗಿ ಮೈಸೂರು ಜಿಲ್ಲೆಯು ಬಹಳ ವೈಶಿಷ್ಟ್ಯತೆ ಹೊಂದಿದೆ. ಅಭಿವೃದ್ಧಿ ವಿಚಾರದಲ್ಲಿ ಮೈಸೂರು ಜಿಲ್ಲೆಯು ಕರ್ನಾಟಕವೇ ಹೆಮ್ಮೆ ಪಡುವಂತಹದ್ದು, ಹಾಗಾಗಿ ಮೈಸೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಗಮನ ನೀಡಿದೆ ಎಂದವರು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು 377 ಕೋಟಿ ರೂ. ಪ್ರಾಧಿಕಾರದ ಅನುದಾನವನ್ನು ಬಳಸಿಕೊಳ್ಳಲು ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಮೈಸೂರು ನಗರದ ಕುಡಿಯುವ ನೀರಿನ ಯೋಜನೆಗೆ 150 ಕೋಟಿ ರೂ.ಗಳನ್ನು ಮಂಜೂರು ಮಾಡಿ, ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದವರು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಸುಮಾರು 18.96 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ. ಕೋವಿಡ್ ಮೂರನೇ ಅಲೆ ಬರಬಹುದು ಎಂದು ಪರಿಣಿತರು ಹೇಳಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗೃತವಾಗಿ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ತಜ್ಞ ವೈದ್ಯರೊಂದಿಗೆ ಈಗಾಗಲೇ ಸಭೆಗಳನ್ನು ನಡೆಸಿ, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚೆಲುವಾಂಬ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವಿಶೇಷವಾಗಿ ಮಕ್ಕಳ ಚಿಕಿತ್ಸೆಗಾಗಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಕೋವಿಡ್ ಚಿಕಿತ್ಸೆಗೆ ವೈದ್ಯರಿಗೆ ತರಬೇತಿಗಳನ್ನು ಸಹ ನೀಡಲಾಗಿದೆ ಎಂದರು.
ಕೇರಳ ರಾಜ್ಯದಲ್ಲಿ ಈಗಾಗಲೇ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಸಚಿವ ಎಸ್ ಟಿ. ಸೋಮಶೇಖರ್ ತಿಳಿಸಿದರು.
ರೈತರು ಬೆಳೆದ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಆಪ್ ಮೂಲಕ ಸ್ವತಃ ಅಪ್ಲೋಡ್ ಮಾಡಲು ರಾಜ್ಯ ಸರ್ಕಾರ ರೈತರಿಗೆ ಅವಕಾಶ ಕಲ್ಪಿಸಿದೆ. ಕಳೆದ ವರ್ಷ ಮೈಸೂರು ಜಿಲ್ಲೆಯಲ್ಲಿ 3 ಲಕ್ಷದ 66 ಸಾವಿರ ರೈತರು ಸ್ವತಃ ಬೆಳೆ ಸಮೀಕ್ಷೆ ಮಾಡಿ ಮಾಹಿತಿಯನ್ನು ಅಪ್ಲೋಡ್ ಮಾಡಿದ್ದರು. ಈ ವರ್ಷವೂ ಎಲ್ಲಾ ರೈತಬಂಧುಗಳು ಕೂಡಲೇ ಕಾರ್ಯೋನ್ಮುಖರಾಗಿ ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಾಲ್ಗೊಳ್ಳಲು ಕೋರುತ್ತೇನೆಂದರು.
ಸ್ವಾತಂತ್ರ್ಯಕ್ಕಾಗಿ ಹಲವಾರು ದೇಶಭಕ್ತರು ಗುಂಡೇಟಿಗೆ ಎದೆಕೊಟ್ಟರು. ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಅವರು ಕಂಡ ಸದೃಢ ಭಾರತದ ಕನಸು ನನಸು ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ ‘ಆತ್ಮ ನಿರ್ಭರ ಭಾರತ ‘ ನಿರ್ಮಾಣದ ಕಡೆಗೆ ದೇಶ ಸಾಗುತ್ತಿದೆ ಎಂದು ಹೇಳಿದರು.
ವಿಶ್ವದಲ್ಲೇ ಬೃಹತ್ ಲಸಿಕಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಕರ್ನಾಟಕ ಕೂಡ ಇದರಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಮಾರಂಭಲ್ಲಿ ಶಾಸಕರುಗಳಾದ ತನ್ವೀರ್ ಸೇಠ್, ನಾಗೇಂದ್ರ, ಜಿಲ್ಲಾಧಿಕಾರಿ ಗೌತಮ್ ಬಗಾದಿ, ನಗರ ಪೊಲೀಸ್ ಆಯುಕ್ತ ಹರ್ಷ ಗುಪ್ತ ಸೇರಿದಂತೆ ಮತ್ತರಿರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವ ಎಸ್. ಟಿ. ಸೋಮಶೇಖರ್ ಅವರು ವೈದ್ಯರು, ದಾದಿಯರು, ಪೌರ ಕಾರ್ಮಿಕರನ್ನು ಮಾತನಾಡಿಸಿ ಅವರಲ್ಲಿ ನೈತಿಕ ಸ್ಥೈರ್ಯ ತುಂಬಿದರು.
ಕೊವಿಡ್ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಪಾಸ್ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

