ಮೈಸೂರು: ಮೈಸೂರು- ಮಿಸ್ಟರ್ ಪ್ರತಾಪ್ ಸಿಂಹ ದಶಪಥ ಯೋಜನೆ ನಿಮ್ಮದಲ್ಲ ಎಂದು ಎಂಎಲ್ಸಿ ವಿಶ್ವನಾಥ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ನಾನು ಎಂಪಿ ಆಗಿದ್ದ ವೇಳೆ ಡಿಪಿಆರ್ ಆಗಿತ್ತು. ಆ ವೇಳೆ ನಾನು, ಧ್ರುವನಾರಾಯಣ್, ರಮ್ಯ, ಡಿಕೆ ಸುರೇಶ್ ಈ ಬಗ್ಗೆ ಸಭೆಗೆ ಹೋಗಿದೇವು. ಕೇಂದ್ರದಲ್ಲಿ ಕುಳಿತು ಈ ಬಗ್ಗೆ ಡಿಪಿಆರ್ ಫೈನಲ್ ಮಾಡಿಸಿದ್ದೇವೆ. ಆದರೆ ಈಗ ಬಂದು ನಾನು ಮಾಡ್ದೆ ಅಂದ್ರೆ ಹೇಗೆ ಎಂದು ವಿಶ್ವನಾಥ್ ಸಂಸದ ಪ್ರತಾಪ್ ಸಿಂಹರನ್ನು ಪ್ರಶ್ನಿಸಿದರು.
ಇದರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಅವರ ಶ್ರಮವೂ ಇದೆ. ಅಂದಿನ ಸಿದ್ದರಾಮಯ್ಯರ ಸರಕಾರದ ಪಾತ್ರವೂ ಇದರಲ್ಲಿದೆ. ಈ ಯೋಜನೆ ನಾವೇ ತಂದಿದ್ದು ಎಂದು ವಿಶ್ವನಾಥ್ ಹೇಳಿದರು.
ಶಾಸಕ ಜಿ ಟಿ ದೇವೇಗೌಡ ವಿರುದ್ದವೂ ವಾಗ್ದಾಳಿ ನಡೆಸಿದ ವಿಶ್ವನಾಥ್, ಉಂಡುವಾಡಿ ಕುಡಿಯುವ ನೀರು ಯೋಜನೆ ಜಿ ಟಿ ದೇವೇಗೌಡ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು, ನೀವು ಎಲ್ಲಿದ್ದಿರೀ ಮಿಸ್ಟರ್ ಜಿ ಟಿ ದೇವೇಗೌಡ ಎಂದು ಪ್ರಶ್ನಿಸಿದರು.
ನಾಳೆಯಿಂದ ಶಾಲಾ-ಕಾಲೇಜು ಆರಂಭ ಸ್ವಾಗತ ವಿಚಾರ ಎಂದ ವಿಶ್ವನಾಥ್, ಮುಂಜಾಗ್ರತಾ ಕ್ರಮದೊಂದಿಗೆ ಶಾಲೆ ಆರಂಭ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ವಿಶ್ವನಾಥ್ ತಿಳಿಸಿದರು.
ಕೇವಲ ನಗರ ಪ್ರದೇಶಗಳಿಗೆ ಮಾತ್ರ ಈ ಕ್ರಮ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಪ್ರಾಮಾಣಿಕವಾಗಿ ಎಲ್ಲಾ ಇಲಾಖೆ ಕಾರ್ಯನಿರ್ವಹಿಸಬೇಕು ಎಂದು ವಿಶ್ವನಾಥ್ ಹೇಳಿದರು.
ಬಿಜೆಪಿಯ ಜನಾಶೀರ್ವಾದ ಯಾತ್ರೆ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿ, ಎಲ್ಲಾ ರಾಜಕೀಯ ಸಭೆ, ಸಮಾರಂಭ, ಮೆರವಣಿಗೆಗಳನ್ನ ಸ್ಥಗಿತಗೊಳಿಸಬೇಕು. ಕೋವಿಡ್ ಹರಡಲು ಇದೇ ಪ್ರಮುಖವಾದ ಕಾರಣವಾಗಿದೆ ಎಂದು ತಿಳಿಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ವೀಕೆಂಡ್ ಕರ್ಫ್ಯೂ ಜಾರಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ರಾಜ್ಯದ ಗಡಿಗಳನ್ನು ಬಂದ್ ಮಾಡಿ, ಬಿಗಿ ಕ್ರಮ ಕೈಗೊಂಡು,ವೀಕೆಂಡ್ ಕರ್ಫ್ಯೂ ರದ್ದು ಮಾಡಬೇಕು ಎಂದು ಹೆಚ್. ವಿಶ್ವನಾಥ್ ಒತ್ತಾಯಿಸಿದರು.

