ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆ ಆರಂಭಿಸುವ ಚಿಂತನೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇರಳದಲ್ಲಿ ಓಣಂ ಮತ್ತು ಮೊಹರಂ ಹಬ್ಬಗಳ ನಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಆತಂಕದಿಂದ ನಿಯಮಗಳನ್ನು ಜಾರಿಗೆ ತಂದಿದೆ. ಈ ಮಧ್ಯೆ ಪ್ರಾಥಮಿಕ 5ನೇ ತರಗತಿಯವರೆಗೆ ಶಾಲೆಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ ಎಂದು ಡಾ. ಸುಧಾಕರ್ ಹೇಳಿದರು.
ಕೇರಳದಲ್ಲಿ ಕೊರೊನಾ ಏರಿಕೆ ಹಾಗೂ ಅಲ್ಲಿನ ವಿದ್ಯಾರ್ಥಿಗಳಿಂದ ರಾಜ್ಯದಲ್ಲಿ ಕೋವಿಡ್ ಕೇಸ್ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸದ್ಯ 6 ರಿಂದ ಟ್ರಯಲ್ ಮಾಡುತ್ತಾ ಇದ್ದೀವಿ ಅಷ್ಟೇ. ಪ್ರಾಥಮಿಕ ಶಾಲೆಗಳಾದ 1 ರಿಂದ 5 ರವರೆಗೆ ತೆರೆಯಲು ಚಿಂತನೆ ಇಲ್ಲ ಎಂದು ಅವರು ತಿಳಿಸಿದರು.
ಸೋಮವಾರದಿಂದ 6ರಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭವಾಗಲಿವೆ. ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರ ಶಾಲೆಗಳನ್ನು ಆರಂಭಿಸಲಾಗುವುದು.

