ಸೆ. 27 ಭಾರತ್ ಬಂದ್ ಗೆ ಕರ್ನಾಟPದಲ್ಲೂ ಬೆಂಬಲ -ಕುರುಬೂರು ಶಾಂತಕುಮಾರ್

ಮೈಸೂರು: ಕೃಷಿ ಕಾಯ್ದೆ ವಿರೋಧಿಸಿ ಸೆ. 27ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಗೆ ಕರ್ನಾಟಕದಲ್ಲೂ ಬೆಂಬಲ ನೀಡಲಾಗುವುದು ಎಮದು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಮುಖ್ಯಸ್ಥ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಒತ್ತಾಯಿಸಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಯತ್ನಿಸುತ್ತಿರುವ ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಜನಸಾಮಾನ್ಯರ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ರಸಗೊಬ್ಬರಗಳ ಬೆಲೆಗಳನ್ನು ಇಳಿಸಬೇಕು ಎಂದು ಒತ್ತಾಯಿಸಿ ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಸೆ. 27ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು ಅದನ್ನು ಬೆಂಬಲಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದವರು ಹೇಳಿದರು.

ರಾಜ್ಯದ ಎಲ್ಲಾ ಜನಪರ ರೈತ ಪರ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ಆಡಳಿತ ವಿರೋಧಿ ರಾಜಕೀಯ ಪಕ್ಷಗಳು ನೆಪಮಾತ್ರಕ್ಕೆ ಕೊನೆಗಳಿಗೆಯಲ್ಲಿ ಬಂದ್ ಬೆಂಬಲಿಸುವುದು ನಾಟಕೀಯವಾಗುತ್ತದೆ. ಈ ಬಗ್ಗೆ ಚಿಂತನೆ ನಡೆಸಿ ಸಕ್ರಿಯವಾಗಿ, ಪ್ರಾಮಾಣಿಕವಾಗಿ ಬಂದ್ ಬೆಂಬಲಿಸಲು ಚಿಂತನೆ ನಡೆಸಬೇಕು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರ ಕಬ್ಬಿನ ಎಫ್ ಪಿಆರ್ ದರವನ್ನು ಎರಡು ವರ್ಷದಿಂದ ನಿರ್ಲಕ್ಷ್ಯ ಮಾಡಿ ಈಗ ಕೇವಲ ಐದು ರೂ.ಏರಿಕೆ ಮಾಡಿ ರೈತರಿಗೆ ದ್ರೋಹ ಬಗೆದಿದೆ. ಕೆ.ಜಿ.ಕೂದಲಿನ ಬೆಲೆ 15 ಸಾವಿರಕ್ಕೆ ಮಾರಾಟವಾಗುತ್ತದೆ. ಆದರೆ ರೈತ ಒಂದು ವರ್ಷ ಕಷ್ಟಪಟ್ಟು ಬೆಳೆದ ಕಬ್ಬಿಗೆ ಕೇವಲ ಐದು ರೂ.ಏರಿಕೆ ಹೇಗೆ ಮಾಡುತ್ತಾರೆ? ಇದರ ಬಗ್ಗೆ ಮಾತನಾಡಲು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಗೆ ತಿಳಿದಿಲ್ಲವೇ? ಈ ತಿಂಗಳ ಅಂತ್ಯದೊಳಗಾಗಿ ಎಫ್ ಪಿ ಆರ್ ದರ ಪುನರ್ ಪರಿಶೀಲನೆ ಆಗದಿದ್ದರೆ ರಾಜ್ಯದ 20 ಲಕ್ಷ ಕಬ್ಬು ಬೆಳೆಗಾರರು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತೀಯ ಕಿಸಾನ್ ಮಂಡಳಿ 8ರಂದು ಪ್ರತಿಭಟನೆ ನಡೆಸಿದೆ. ಕೃಷಿಕಾಯ್ದೆಗಳ ಬಗ್ಗೆ ಇವರಿಗೆ ಅರಿವಿಲ್ಲದಿದ್ದರೆ ರೈತ ಮುಖಂಡರ ಜೊತೆ ಸಂವಾದ ನಡೆಸಲಿ. ಬ್ಯಾಂಕ್ ಗಳು ಸಹಕಾರ ಬ್ಯಾಂಕ್ ರೈತರಿಗೆ ಸಾಲ ನೀಡಲು ಕಿರುಕುಳ ನೀಡುತ್ತಿದ್ದಾರೆ. 2 ಲಕ್ಷ ರೂ. ತನಕ ರೈತರ ಸಾಲ ಅಡಮಾನ ನೋಂದಣಿ ಬೇಕಿಲ್ಲ. ಎನ್ ಡಿಸಿ ಸರ್ಟಿಫಿಕೇಟ್ ಬೇಕಿಲ್ಲ ಎಂಬ ನಿಯಮವಿದ್ದರೂ ರೈತರನ್ನು ಇದಕ್ಕಾಗಿ ಅಲೆದಾಡಿಸುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ರೈತರಿಗೆ ಬ್ಯಾಂಕ್ ಗಳ ಬಗ್ಗೆ ಅಸಹ್ಯವಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಸಾಮಾಜಿಕ ಜಾಲತಾಣದ ಬರಡನಪುರ ನಾಗರಾಜ್, ನಗರ ಅಧ್ಯಕ್ಷ ದೇವೇಂದ್ರ ಕುಮಾರ್ ಉಪಸ್ಥಿತರಿದ್ದರು.