ಅಮೇರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಮೋದಿ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು 76ನೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಉನ್ನತ ಮಟ್ಟದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಅಲ್ಲದೆ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧ ಕುರಿತು ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

ಅಮೆರಿಕ ನಾಯಕರ ಜೊತೆ ದ್ವಿಪಕ್ಷೀಯ ಸಂಬಂಧ ಮಾತುಕತೆ, ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಿಕೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಹಾಗೂ ಉದ್ಯಮ ಸಂವಾದದಲ್ಲಿ ಭಾಗಿಯಾಗುವುದು ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ಪ್ರಮುಖ ಕಾರ್ಯಕ್ರಮಗಳು.

ಮೋದಿಯವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತೆರಳುತ್ತಿದ್ದು, ಅಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರ ಜೊತೆ ಪ್ರಸಕ್ತ ಪ್ರಾದೇಶಿಕ ಭದ್ರತಾ ವಿಚಾರಗಳು, ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಸೆ. 24ರಂದು ಮಾತುಕತೆ ನಡೆಸಲಿದ್ದಾರೆ.

ಮೂಲಭೂತವಾದ, ಉಗ್ರವಾದ, ಗಡಿಯಲ್ಲಿ ಭಯೋತ್ಪಾದನೆ ಮತ್ತು ಜಾಗತಿಕ ಭಯೋತ್ಪಾದನೆ ಜಾಲವನ್ನು ನಿಗ್ರಹಿಸುವ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.