ಜೆಡಿಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ -ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನಮ್ಮ ಪಕ್ಷದ ಅಭ್ಯರ್ಥಿ ವಿಚಾರವಾಗಿ ಮಾತನಾಡಲು ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿ ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೆಚ್ ಡಿಕೆ ಗುರುವಾರ ಮಾತನಾಡಿದರು.

ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಜೆಡಿಎಸ್ ಟಿಕೆಟ್ ನೀಡಿದ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬುದು ನಮ್ಮ ಪಕ್ಷದ ವಿಚಾರ. ಅದರ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಿ ನಾವು ನಿರ್ಧರಿಸಬೇಕಿಲ್ಲ. ನಮ್ಮ ಪಕ್ಷದ ಬಗ್ಗೆ, ನಮ್ಮ ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವರು ಯಾರು? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬುದನ್ನು ಜೆಡಿಎಸ್ ಮುಖಂಡರ ಜೊತೆ ಚರ್ಚಿಸಿ ಲೆಕ್ಕಚಾರ ಹಾಕಿ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ನಮ್ಮ ಪಕ್ಷದ ಯಾರನ್ನು ಅಭ್ಯರ್ಥಿ ಮಾಡಬೇಕು ಎಂದು ಸಿದ್ದರಾಮಯ್ಯನವರ ಅಭಿಪ್ರಾಯ, ಅವರ ಪರ್ಮಿಷನ್ ಕೇಳುವ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂದು ಹೇಳಲು ಸಿದ್ದರಾಮಯ್ಯ ಜೆಡಿಎಸ್ ಮುಖಂಡರಾ? ನಮ್ಮ ಅಭ್ಯರ್ಥಿಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆಗಳೇ ಅಪ್ರಸ್ತುತ ಎಂದು ಹಿಗ್ಗಾ ಮುಗ್ಗಾ ಹೆಚ್ ಡಿಕೆ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.