ಶಿವರಾಜ ಸಜ್ಜನರ್ ಗೆ ಮತ ನೀಡಿದರೆ ಸಿಎಂ ಬೆಂಬಲಿಸಿದಂತೆ -ಡಾ.ಕೆ.ಸುಧಾಕರ್

ಹಾನಗಲ್: ಹಾನಗಲ್ ಕ್ಷೇತ್ರದ ಜನರು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಮತ ನೀಡಿದರೆ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿದಂತಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಹಾನಗಲ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಳ, ಸಜ್ಜನ ವ್ಯಕ್ತಿಯಾಗಿದ್ದು, ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ ಹಾಗೂ ಇದೇ ಹಾವೇರಿ ಜಿಲ್ಲೆಯವರಾಗಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಲು ಇದೊಂದು ಅವಕಾಶವಾಗಿದೆ. ರಾಜ್ಯದ ಜನರೆಲ್ಲರೂ ಮುಖ್ಯಮಂತ್ರಿಗಳನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಜನರು ನೀಡುವ ಮತ ನೇರವಾಗಿ ಮುಖ್ಯಮಂತ್ರಿಗಳಿಗೆ ನೀಡಿದಂತಾಗುತ್ತದೆ. ಇದು ಬಸವರಾಜ ಬೊಮ್ಮಾಯಿರವರು ಸಿಎಂ ಆದ ಬಳಿಕ ಎದುರಿಸುತ್ತಿರುವ ಮೊದಲ ಉಪಚುನಾವಣೆಯಾಗಿದ್ದರೂ, ಪ್ರತಿಷ್ಠೆ ಅಲ್ಲ ಎಂದು ಅವರೇ ಹೇಳಿದ್ದಾರೆ. ಆದರೆ ಇದು ಹಾನಗಲ್ ಕ್ಷೇತ್ರದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಸಿಎಂ ಹೇಳಿದ್ದಾರೆ ಎಂದರು.

ಒಂದೂವರೆ ವರ್ಷದ ಅವಧಿಯಲ್ಲಿ ತವರು ಜಿಲ್ಲೆ ಹಾವೇರಿಗೆ ಏನು ಮಾಡಬೇಕು ಎಂಬ ಚಿಂತನೆ ಮುಖ್ಯಮಂತ್ರಿಗಳಿಗಿದೆ. ಬಿಜೆಪಿಯನ್ನು ಗೆಲ್ಲಿಸಿದರೆ ಅದನ್ನು ಅನುಷ್ಠಾನಕ್ಕೆ ತರಲು ಸಹಾಯಕವಾಗುತ್ತದೆ. ಬೇರೆ ಪಕ್ಷದವರನ್ನು ಗೆಲ್ಲಿಸಿದರೆ ಅಭಿವೃದ್ಧಿ ಕಾರ್ಯ ಸಾಧ್ಯವಾಗುವುದಿಲ್ಲ. ಬಿಜೆಪಿ ಗೆಲ್ಲಿಸಿದರೆ ಸಿ.ಎಂ.ಉದಾಸಿ ಅವರ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತವೆ. 2018ರಲ್ಲಿ ಹಾನಗಲ್ ಜನತೆ ಅಭೂತಪೂರ್ವ ಜಯವನ್ನು ಬಿಜೆಪಿಗೆ ತಂದುಕೊಟ್ಟಿದ್ದರು. ಅಂದರೆ ಐದು ವರ್ಷಗಳ ಕಾಲ, 2023 ರವರೆಗೂ ಹಾನಗಲ್ ಜನರು ಬಿಜೆಪಿಗೆ ಅವಕಾಶ ನೀಡಿದ್ದಾರೆ ಎಂದರು.

ಬದ್ಧತೆ ಇಲ್ಲದ ಕಾಂಗ್ರೆಸ್
500 ಕೋಟಿ ರೂ. ಗೂ ಅಧಿಕ ಮೊತ್ತದ ಎರಡು ಏತ ನೀರಾವರಿ ಯೋಜನೆಗೆ ಹಿಂದಿನ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. ಕಾಂಗ್ರೆಸ್ ನವರು ಇದನ್ನು ಮಾಡಲಿಲ್ಲ. ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನೂ ನೀಡಲಾಗಿದೆ. ಕಾಂಗ್ರೆಸ್ ನವರು ಹಾವೇರಿಗೆ ಮಂಜೂರಾದ ಕಾಲೇಜನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದರು. ಜಿಲ್ಲೆಯ ಜನರ ಬಗ್ಗೆ ಅವರಿಗೆ ಯಾವುದೇ ಬದ್ಧತೆ ಇಲ್ಲ ಎಂದರು.

ಗೆದ್ದ ಮೇಲೆ ಏನು ಮಾಡುತ್ತೇವೆಂದು ಕಾಂಗ್ರೆಸ್ ನ ಒಬ್ಬರೂ ಹೇಳುತ್ತಿಲ್ಲ. ಆದರೆ ಮುಖ್ಯಮಂತ್ರಿಗಳು ವಿಷನ್ ಡಾಕ್ಯುಮೆಂಟ್ ರೂಪಿಸುತ್ತೇವೆ ಎಂದು ಹೇಳಿದ್ದಾರೆ ಎಂದರು.