ಗ್ರೇಟ್ ಲಯರ್ ಎಂದ ಸಿದ್ದರಾಮಯ್ಯಗೆ ಹೆಚ್.ಡಿ.ಕೆ ತಿರುಗೇಟು

ಸಿಂಧಗಿ: ತಮ್ಮನ್ನು ‘ಗ್ರೇಟ್ ಲಯರ್’ ಎಂದು ಕರೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, “ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೆಸ್ ಪಡೆದಿರಿ ಎನ್ನುವುದನ್ನು ಜನರಿಗೆ ತಿಳಿಸಿ” ಎಂದು ಹೇಳಿದರು.

ಸಿಂಧಗಿ ಉಪ ಚುನಾವಣೆಯ ನಿಮಿತ್ತ ಕ್ಷೇತ್ರದಲ್ಲಿ ಕೊನೆ ದಿನದ ಪ್ರಚಾರ ನಡೆಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೆಚ್‌ ಡಿಕೆ  ಮಾತನಾಡಿದರು.

“ನನ್ನನ್ನು ಸಿದ್ದರಾಮಯ್ಯ ‘ಗ್ರೇಟ್ ಲಯ್ಯರ್’ ಎಂದು ಕರೆದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಸತ್ಯವಂತರು ಅಲ್ಲವೆ? ಹಾಗಾದರೆ ಅವರು ಯಡಿಯೂರಪ್ಪ ಅವರಿಂದ ಚುನಾವಣೆ ಸೂಟ್ ಕೇಸ್ ಪಡೆದಿಲ್ಲ ಎಂದು ಹೇಳಲಿ” ಎಂದು ಸವಾಲು ಹಾಕಿದರು.

2009ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ, ಅದರಲ್ಲೂ ಮೊದಲ ಹಂತದ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಮಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನಿಮ್ಮ ಆಪ್ತರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಹಣ ಪಡೆದುಕೊಳ್ಳಲಿಲ್ಲವೆ? ಆ ಮೂಲಕ ನೀವು ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕೆಲಸ ಮಾಡಿದಿರೋ ಇಲ್ಲವೋ ಎಂಬುದನ್ನು ಜನರ ಮುಂದೆ ಇಡಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರವಾಗಿ ಹೇಳಿದರು.

ಮೊದಲು ಆ ವಿಷಯವನ್ನು ಬಹಿರಂಗವಾಗಿ ಹೇಳಿ. ಆಮೇಲೆ ನಾನು ‘ಗ್ರೇಟ್ ಲಯ್ಯರ್’ ಅಥವಾ ನೀವು ‘ಗ್ರೇಟ್ ಲಯ್ಯರ್’ ಎನ್ನುವುದು ಗೊತ್ತಾಗುತ್ತದೆ ಎಂದು ಪ್ರತಿಪಕ್ಷ ನಾಯಕನಿಗೆ ಕುಮಾರಸ್ವಾಮಿ  ಸವಾಲು ಹಾಕಿದರು.

ಸಿದ್ದರಾಮಯ್ಯ ಅವರು ಆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ರಾಜಕೀಯದಲ್ಲಿ ಇಷ್ಟು ದೂರ ಬೆಳೆದು ಬಂದಿದ್ದಾರೆ. ಅವರು ಒಮ್ಮೆ ಆ ತಾಯಿಯನ್ನು ಮನಸ್ಸಿನಲ್ಲೇ ಸ್ಮರಿಸಿ, ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಾನು ಯಡಿಯೂರಪ್ಪ ಅವರಿಂದ ಹಣ ಪಡೆದಿಲ್ಲ ಎಂದು ಹೇಳಲಿ ಎಂದರು ಕುಮಾರಸ್ವಾಮಿ ಅವರು.