ಉಪಚುನಾವಣೆ ಫಲಿತಾಂಶ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಮುನ್ಸೂಚನೆ -ಡಿ.ಕೆ.ಶಿ.

ಬೆಂಗಳೂರು: ರಾಜ್ಯದ ಜನ ಬದಲಾವಣೆ ಬಯಸಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ವರ್ಗವನ್ನು ಪ್ರತಿನಿಧಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಸ್ಪಷ್ಟ ಮುನ್ಸೂಚನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆ ಫಲಿತಾಂಶ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆಶಿವಕುಮಾರ್ ಮಂಗಳವಾರ ಮಾತನಾಡಿದರು.

ಚುನಾವಣೆ ನಡೆದ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ, ಮತ್ತೊಂದರಲ್ಲಿ ಜೆಡಿಎಸ್ ಗೆದ್ದಿತ್ತು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಬಿಜೆಪಿ ಗೆದ್ದಿದ್ದ ಹಾನಗಲ್ ಕ್ಷೇತ್ರವನ್ನು ನಾವು ಗೆದ್ದುಕೊಂಡಿದ್ದೇವೆ. ಕಳೆದ ಬಾರಿ ಸಿಂದಗಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕಾಂಗ್ರೆಸ್, ಈ ಬಾರಿ ಮತಪ್ರಮಾಣ ದುಪ್ಪಟ್ಟು ಮಾಡಿಕೊಂಡು ಎರಡನೇ ಸ್ಥಾನಕ್ಕೆ ಏರಿದೆ ಎಂದು ಡಿಕೆಶಿ ತಿಳಿಸಿದರು.

ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಮತದಾರ ಬೇಸತ್ತಿದ್ದು, ಅದನ್ನು ಬದಲಿಸಲು ನಿರ್ಧರಿಸಿದ್ದಾನೆ. ಅದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.

ನಾವು ಒಂದೇ ದಿನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಹಂತ-ಹಂತವಾಗಿ ತರಬೇಕು. ಒಟ್ಟಾರೆಯಾಗಿ ಎರಡೂ ಕ್ಷೇತ್ರದ ಚುನಾವಣೆ ನೋಡಿದರೆ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಮತದಾರರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇವಲ ಕೊರೋನಾ ವಿಚಾರ ಮಾತ್ರವಲ್ಲ, ಅವರಿಗೆ ಸಿಕ್ಕ ವ್ಯವಸ್ಥೆಯಲ್ಲಿ ಈ ಪರಿಸ್ಥಿತಿ ಬಂದಿದೆ. ಇದು ದೇಶಕ್ಕೆ ದೊಡ್ಡ ಸಂದೇಶ.

ಮುಖ್ಯಮಂತ್ರಿಗಳು, ಇತರೆ ನಾಯಕರು ಆಡಿದ ಮಾತುಗಳನ್ನು ಜನ ನೋಡಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಕೇಳಿದ್ದಾರೆ. ಉಪಚುನಾವಣೆ ವೇಳೆ ಅದೊಂದು ಚಾಳಿ ಆಗಿದ್ದು, ನಾವೆಲ್ಲ ರಾಜಕಾರಣಿಗಳು ಸೇರಿ ಅದನ್ನು ತಪ್ಪಿಸಬೇಕಿದೆ.

ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದ್ದು, ಅದನ್ನು ನಾವು ಸರಿ ಮಾಡುತ್ತೇವೆ ಎಂದು ದೀಪಾವಳಿ ಹಬ್ಬದ ಸಮಯದಲ್ಲಿ ಶುಭ ಘಳಿಗೆಗೆ ಹೆಜ್ಜೆ ಇಡುವ ವಿಶ್ವಾಸದಿಂದ ಹೇಳುತ್ತೇನೆ ಎಂದರು ಡಿಕೆಶಿ.

ಈ ಚುನಾವಣೆ ಫಲಿತಾಂಶ ಬರೀ ಸಿಎಂಗೆ ಸಂಬಂಧಪಟ್ಟ ವಿಚಾರವಲ್ಲ. ಇಡೀ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಆಗಿರುವ ಮುಖಭಂಗ. ಇಡೀ ಸರ್ಕಾರ ಹಾಗೂ ಅದರ ಆಡಳಿತದ ಸೋಲು. ಆ ಪಕ್ಷದಲ್ಲಿನ ಮುಸುಕಿನ ಗುದ್ದಾಟದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅಲ್ಲಿ ಪಕ್ಷ ಕಟ್ಟಿದವರು ಲೆಕ್ಕಕ್ಕೆ ಇಲ್ಲವಾಗಿದ್ದಾರೆ ಎಂದರು.