ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಿ ಹೊರಟು ಬಿಡಿ -ಡಾ. ಹೆಚ್. ಸಿ. ಮಹದೇವಪ್ಪ

ಮೈಸೂರು: ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಹಿಂದುಳಿದ ವರ್ಗಗಳಲ್ಲಿರುವ ಅಲೆಮಾರಿಗಳು, ಅರೆ ಅಲೆಮಾರಿಗಳು ಹಾಗೂ ಅತೀ ಹಿಂದುಳಿದ ಸಮುದಾಯಗಳ ಕುರಿತು ಕುಲ ಶಾಸ್ತ್ರೀಯ ಅಧ್ಯಯನ ನಡೆಸುವಂತಹ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವು ಖಂಡನೀಯ ಎಂದವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬಹಳಷ್ಟು ಅಲಕ್ಷಿತ ಸಮುದಾಯಗಳಿಗೆ ಈಗಲೂ ಅವರ ಹಿನ್ನೆಲೆಯ ಬಗ್ಗೆ ಅಧ್ಯಯನ ನಡೆಸಿ ಅವರ ಕುಂದು ಕೊರತೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಿಕೊಳ್ಳಬೇಕಾದ ಜರೂರಿದ್ದರೂ ಶೋಷಿತ ವರ್ಗಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತುಗಳು ಮುನ್ನಲೆಗೆ ಬರಬಾರದೆಂಬ ದುರುದ್ದೇಶದಿಂದ ಬಿಜೆಪಿ ಪಕ್ಷವು ಸಮುದಾಯ ವಿರೋಧಿ ಕೆಲಸವನ್ನು ಮಾಡುತ್ತಿದೆ ಎಂದು ಡಾ. ಮಹದೇವಪ್ಪ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಸಾಮಾಜಿಕ ನ್ಯಾಯಕ್ಕೆ ಪೂರಕವಾದ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಿದರೆ ಆರ್ ಎಸ್ ಎಸ್ ನಲ್ಲಿ ನಿಮಗೆ ಯಾವ ಬಹುಮಾನ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ ಮಾಜಿ ಸಚಿವ ಡಾ. ಮಹದೇವಪ್ಪ ಪ್ರಶ್ನಿಸಿದ್ದಾರೆ.

ನಿಮ್ಮ ಹುಚ್ಚು ನಿರ್ಧಾರದಿಂದ ಹಿಂದುಳಿದ ವರ್ಗದ ಜನರ ಹಿತವನ್ನು ಬಲಿ ಕೊಡುವ ಬದಲು ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಿ ಹೊರಟು ಬಿಡಿ ಎಂದವರು ಟ್ವೀಟ್ ಮಾಡಿದ್ದಾರೆ.