ಮೇಕೆದಾಟು ಆರಂಭಿಸುವಂತೆ ಕಾಂಗ್ರೆಸ್ ಒತ್ತಾಯ; ಯಾವ ತಂತ್ರವೂ ಇಲ್ಲ -ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು, ನ. 9: ಮೇಕೆದಾಟು ಆರಂಭಿಸುವಂತೆ ಕಾಂಗ್ರೆಸ್ ಒತ್ತಾಯವಿದೆಯೇ ಹೊರತು ನಮ್ಮದು ಯಾವ ತಂತ್ರವೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಸಿದ್ದರಾಮಯ್ಯ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮೇಕೆದಾಟು ಡಿಪಿಆರ್ ಮಾಡಲು ತಡ ಮಾಡಿದ್ದರು. ಈಗ ಪಾದಯಾತ್ರೆ ಮಾಡುವುದಕ್ಕೆ ಅರ್ಥವಿದೆಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳಿದ್ದಾರೆಂಬ ಮಾಧ್ಯಮದದವರ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ನಮ್ಮ ಕಾಲದಲ್ಲೇ ಡಿಪಿಆರ್ ಆಗಿದೆ. ಅವರೂ ಕೂಡ ಹಿಂದೆ ನೀರಾವರಿ ಮಂತ್ರಿಯಾಗಿದ್ದರು. ನಮ್ಮ ಕಾಲದಲ್ಲೇ ಡಿಪಿಆರ್ ಆಗಿದೆ. ಆರು ಸಾವಿರ ಚಿಲ್ಲರೆ ಕೋಟಿಗೆ ಆಗಿದೆ ಪಕ್ಕಾ ಮಾಹಿತಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಕಳಿಸಿದ್ವಿ, ಕ್ಲಿಯರೆನ್ಸ್ ಬಂದಿಲ್ಲ. ಕೆಲಸ ಪ್ರಾರಂಭಿಸಲು ಯಾವುದೇ ಅಡ್ಡಿ ಅಡೆ ತಡೆ ಇಲ್ಲ. ನ್ಯಾಯಾಲಯದ ಆದೇಶ ಕೂಡ ಕ್ಲಿಯರ್ ಆಗಿದೆ. ತಮಿಳುನಾಡಿನವರು ಸುಮ್ಮನೆ ರಾಜಕೀಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ಸರ್ಕಾರ ಬಂದು ಆಗಲೇ ಎರಡೂ ಕಾಲು ವರ್ಷವಾಯಿತು. ಶೀಘ್ರ ಕೆಲಸ ಪ್ರಾರಂಭ ಮಾಡಿ ಅಂತ ಪಾದಯಾತ್ರೆ ಅಷ್ಟೇ ಎಂದವರು ಹೇಳಿದರು.

ಕಾಂಗ್ರೆಸ್ ಒತ್ತಡದ ತಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒತ್ತಡ ಹಾಕಿದರೆ ಮಾತ್ರ ಅಲ್ಲವೇನ್ರಿ ಇವರು ಮಾಡೋದು, ತಂತ್ರ ಅಲ್ಲ ಬೊಮ್ಮಾಯಿಯವರು ಏನಾದರೂ ಹೇಳುತ್ತಾರೆ. ಕಾಂಗ್ರೆಸ್ ನವರನ್ನು ಬಿಟ್ಟು ಬಿಡಿ ಹೋಗಲಿ ಅವರೇ ಮಾಡಲಿ ಎಂದರು.

ಕೆಲಸ ಪ್ರಾರಂಭ ಮಾಡಿ, ಕೆಲಸ ವಿಳಂಬವಾಗುತ್ತಿದೆ. ಅನಗತ್ಯವಾಗಿ ತಡಮಾಡುತ್ತಿದ್ದಾರೆ. ಯಾಕೆ ಅವರು ಪ್ರಾರಂಭ ಮಾಡುತ್ತಿಲ್ಲ. ಪ್ರಾರಂಭ ಮಾಡಲು ತೊಂದರೆ ಏನು, ತಮಿಳ್ನಾಡಿನವರು ವಿರೋಧ ಮಾಡಲು ಅವರಿಗೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಸುಪ್ರೀಂಕೋರ್ಟ್ ಬೆಂಬಲವಿಲ್ಲ, ಪ್ರಾರಂಭಿಸದೇ ವಿಳಂಬಮಾಡುತ್ತಿದ್ದಾರೆ. ಕೂಡಲೇ ಕೆಲಸ ಮಾಡಿ ಅಂತ ಒತ್ತಾಯಕ್ಕೋಸ್ಕರ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಬಳಿ ಸಾಕ್ಷಿ ಕೇಳುತ್ತಿದ್ದಾರಲ್ಲ ಎಂದಾಗ, ತನಿಖಾ ಏಜೆನ್ಸಿ ಯಾರ ಹತ್ತಿರ ಇದೇರಿ, ಮಾಡಲಿ ಅವರು, ಸಾಕ್ಷಿ ಸಂದರ್ಭ ಅವಕಾಶ ಬಂದಾಗ ಕೊಡೋಣ. ಸರಿಯಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ಅದರಲ್ಲಿ ಆಡಳಿತದವರಿರಲಿ, ಯಾರಾದರೂ ಇರಲಿ. ತಪ್ಪು ಮಾಡಿದವರೆ ಶಿಕ್ಷೆ ಆಗಬೇಕು. ಬಿಟ್ ಕಾಯಿನ್ ಯಾರೋ ತಗೊಂಡಿದ್ದಾರೆಂದು ಸುದ್ದಿ ಇದೆ. ಅದು ಜನರಿಗೆ ಗೊತ್ತಾಗಬೇಕಲ್ಲ. ಅದರ ಬಗ್ಗೆ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯನವರು ಹೇಳಿದರು.