ಬೆಂಗಳೂರು: ಜನತಾ ಪತ್ರಿಕೆ ಜೆಡಿಎಸ್ ಪಕ್ಷದ ಮುಖವಾಣಿ ಅಲ್ಲ. ಸಮಸ್ತ ಕನ್ನಡಿಗರ ಮುಖವಾಣಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೇಪಿ ಭವನದಲ್ಲಿ ನಡೆದ ಜನತಾ ಪರ್ವ 1.0ದ ಎರಡನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮ ಕಾರ್ಯಕ್ರಮದಲ್ಲಿ ಸೋಮವಾರ ನಡೆದ ಜನತಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನತಾ ಪತ್ರಿಕೆ ಕೃಷಿ ಕಾರ್ಮಿಕರು ಮತ್ತು ಶ್ರಮಿಕರ ಮುಖವಾಣಿ ಆಗಿ ಕೆಲಸ ಮಾಡುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಡೀ ರಾಜ್ಯದ, ದೇಶದ ಬೆಳವಣಿಗೆಗಳ ಬಗ್ಗೆ ಈ ಪತ್ರಿಕೆಯಲ್ಲಿ ವಿಶ್ಲೇಷಣೆ ಇರುತ್ತದೆ. ನಾಡಿನ ಹಿತದೃಷ್ಟಿಯಿಂದ ಜನರಿಗೆ ಬದ್ಧವಾಗಿ ಪತ್ರಿಕೆಯನ್ನು ರೂಪಿಸಲಾಗುವುದು ಎಂದು ಹೆಚ್ ಡಿಕೆ ಅವರು ಹೇಳಿದರು.
ಬೇರೆ ರಾಜ್ಯದಲ್ಲಿ ಹಲವಾರು ಪಕ್ಷಗಳು ಅವರದ್ದೇ ಆದ ಪಕ್ಷದ ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪತ್ರಿಕೆ ಲೋಕಾರ್ಪಣೆ ಆಗುತ್ತಿದೆ. ಯಾವುದೇ ಕಾರಣಕ್ಕೂ ಜನತಾ ಪತ್ರಿಕೆ ಪಕ್ಷದ ಮುಖವಾಣಿ ಆಗೋದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ನಮ್ಮ ಪಕ್ಷದಲ್ಲಿ ಸಮರ್ಥ ನಿಷ್ಠೆ ಇರುವ ನಾಯಕರು ಕಾರ್ಯಕರ್ತರು ಇದ್ದಾರೆ. ಅವರೆಲ್ಲರ ಮನೆ ಬಾಗಿಲಿಗೆ ಈ ಪತ್ರಿಕೆ ಮುಟ್ಟಬೇಕು ಎಂದು ಅವರು ಹೇಳಿದರು.
ಜನತಾ ಪತ್ರಿಕೆ ಬಿಡುಗಡೆ ಮಾತನಾಡಿದ ಪಿ. ರಾಮಯ್ಯ ಅವರು, ಇದು ಜನ ಸಾಮಾನ್ಯರ ಪತ್ರಿಕೆ ಆಗಿ ಮೂಡಿಬರಲಿದೆ. ಇದು ಪಾರ್ಟಿಯ ಮುಖವಾಣಿಯಲ್ಲ ಎಂದು ನನಗೆ ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಅವರು ತಿಳಿಸಿದರು.

