ಬೆಂಗಳೂರು: ವಿಧಾನಮಂಡಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದೆಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸಭಾಪತಿ ಹೊರಟ್ಟಿ ಅವರು ಸೋಮವಾಋ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ವಿಧಾನಮಂಡಳ ಚಳಿಗಾಲದ ಅಧಿವೇಶನ 2018ರ ನಂತರ ಬೆಳಗಾವಿಯಲ್ಲಿ ನಡೆದಿರಲಿಲ್ಲ. ಈ ಬಾರಿ ವಿಧಾನಮಂಡಳದ ಕಲಾಪಗಳ ನೇರಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪೂರ್ವಸಿದ್ಧತೆ ಸಭೆ ನಡೆಸಲಾಯಿತು ಎಂದು ಅವರು ಹೇಳಿದರು.
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದವರು ತಿಳಿಸಿದರು.
ಇ-ಗವರ್ನನ್ಸ್, ಲೋಕೋಪಯೋಗಿ, ವಾರ್ತಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.
ಈ ಬಾರಿ ಅಧಿವೇಶನದ ಕಲಾಪವನ್ನು ನೇರಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಹೊರಟ್ಟಿ ಅವರು ನ. 20 ರೊಳಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಡಿಸೆಂಬರ್ ಮಾಹೆಯಲ್ಲಿ ಅಧಿವೇಶನ ನಡೆಯುವುದು ಖಚಿತವಾಗಿದೆ. ದಿನಾಂಕವನ್ನು ಸರಕಾರ ನಿರ್ಧರಿಸಲಿದೆ ಎಂದು ಹೇಳಿದರು.
ಶಾಸಕರ ಭವನ ನಿರ್ಮಾಣ ಬಹುಜನರ ಬೇಡಿಕೆಯಾಗಿದೆ. ಇದನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದವರು ತಿಳಿಸಿದರು.
ಸುವರ್ಣ ವಿಧಾನಸೌಧವನ್ನು ನಿರ್ಮಿಸಿ ಪ್ರತಿವರ್ಷ ಅಧಿವೇಶನ ನಡೆಸುವುದರಿಂದ ಶಾಸಕರ ಭವನ ನಿರ್ಮಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಸುವರ್ಣ ವಿಧಾನಸೌಧಕ್ಕೆ ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕರ ಹಾಜರಾತಿ ಕಡ್ಡಾಯಗೊಳಿಸಲು ಅವಕಾಶಗಳಿರುವುದಿಲ್ಲ. ಆದರೆ ಬೆಳಗಾವಿ ಅಧಿವೇಶನದ ಕಲಾಪಗಳಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೊರಟ್ಟಿ ಅವರು ಹೇಳಿದರು.
ಪ್ರಶ್ನೋತ್ತರ, ಶೂನ್ಯ ವೇಳೆ, ಗಮನಸೆಳೆಯುವ ಸೂಚನೆ ಸೇರಿದಂತೆ ತುರ್ತು ವಿಷಯಗಳ ಚರ್ಚೆಗೆ ನಿಯಮಾವಳಿ ಪ್ರಕಾರ ಅವಕಾಶವನ್ನು ಕಲ್ಪಿಸಲಾಗುವುದು. ಆಯಾ ದಿನದ ವಿಷಯಸೂಚಿಯ ಪ್ರಕಾರ ಕಲಾಪವನ್ನು ನಡೆಸಲಾಗುವುದೆಂದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ವಿಧಾನಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

