ಬಿಟ್ ಕಾಯಿನ್ ಹಗರಣ: ಬಿಜೆಪಿ ಗೌಪ್ಯ ಸಭೆ

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸದಲ್ಲಿ ಸಚಿವರು ಮತ್ತು ಶಾಸಕರುಗಳ ಗೌಪ್ಯ ಸಭೆ ನಡೆದಿದೆ.

ಮಹತ್ವದ ಬೆಳವಣಿಗೆಯಲ್ಲಿ ನಡೆದಿರುವ ಈ ಸಭೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ರೇಣುಕಾಚಾರ್ಯ ಅವರ ಸರ್ಕಾರಿ ನಿವಾಸದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಶಂಕರ್ ಪಟೇಲ್ ಮುನೇನ ಕೊಪ್ಪಘಿ, ಶಾಸಕರಾದ ರಾಜುಗೌಡ ನಾಯಕ್, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಪಾಟೀಲ್, ಮುಖಂಡರಾದ ಎಂ.ರುದ್ರೇಶ್, ಮರಿಸ್ವಾಮಿ, ಸೇರಿದಂತೆ ಮತ್ತಿತರರು ಗುಪ್ತವಾಗಿ ಮಾತುಕತೆ ನಡೆಸಿರುವುದು ಹತ್ತು ಹಲವು ಸಂಶಯಕ್ಕೆ ಕಾರಣವಾಗಿದೆ.

ಇತ್ತೀಚೆಗೆ ರೇಣುಕಾಚಾರ್ಯ ಅವರ ಕಾಲಿಗೆ ಶಸ ಚಿಕಿತ್ಸೆ ನಡೆಸಲಾಗಿತ್ತು. ಆರೋಗ್ಯ ವಿಚಾರಿಸುವ ನೆಪದಲ್ಲಿ ಆಗಮಿಸಿದ್ದ ಬಿಜೆಪಿ ಮುಖಂಡರು ಸರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದ್ದಾರೆ.

ಒಂದು ಕಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಗೆ ತೆರಳಿರುವುದು ಇತ್ತ ರೇಣುಕಾಚಾರ್ಯ ನಿವಾಸದಲ್ಲಿ ಸಚಿವರು ಮತ್ತು ಶಾಸಕರು ಸಭೆ ಸೇರಿದ್ದು, ರಾಜಕೀಯದಲ್ಲಿ ತೀವ್ರ ಸಂಚನ ಉಂಟು ಮಾಡಿದೆ.