ಪ್ರಧಾನಿಗಳೊಂದಿಗೆ ಬಿಟ್ ಕಾಯಿನ್ ಬಗ್ಗೆ ಚರ್ಚೆಯೇ ಆಗಿಲ್ಲ -ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ಪ್ರಧಾನಿ ಅವರೊಂದಿಗೆ ಬಿಟ್ ಕಾಯಿನ್ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಅವರು ಗುರುವಾರ ಭೇಟಿ ಮಾಡಿ ನಂತರ ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿದರು.

ಪ್ರಧಾನಿಗಳೊಂದಿಗೆ ಮಾತುಕತೆ ನಡೆಸುವ ಮಧ್ಯೆ ಬಿಟ್ ಕಾಯಿನ್ ದಂಧೆ ಪ್ರಸ್ತಾಪಿಸಲು ನಾನಾಗಿಯೇ ಪ್ರಯತ್ನಪಟ್ಟೆ, ಆಗ ಪ್ರಧಾನ ಮಂತ್ರಿಗಳು ಇವುಗಳ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ನೀವು ನಿಷ್ಠೆ, ದಿಟ್ಟತನದಿಂದ ಕೆಲಸ ಮಾಡಿಕೊಂಡು ಹೋಗಿ, ಎಲ್ಲಾ ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆಂದರು.

ಬಿಟ್ ಕಾಯಿನ್ ಬಗ್ಗೆ ನನಗಿಂತ ಹೆಚ್ಚು ಕೇಂದ್ರದ ನಾಯಕರ ಬಳಿಯೇ ಮಾಹಿತಿ ಇರುತ್ತದೆ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ದೆಹಲಿಯಲ್ಲಿಯೇ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆಂದು ಅವರು ತಿಳಿಸಿ, ಕಳೆದ 100 ದಿನಗಳಲ್ಲಿ ತಮ್ಮ ನೇತೃತ್ವದ ಸರ್ಕಾರ ನಡೆಸಿರುವ ಆಡಳಿತ, ಸುಧಾರಣಾ ಕ್ರಮಗಳು, ಕೈಗೊಂಡಿರುವ ಯೋಜನೆಗಳ ಬಗ್ಗೆ ಪ್ರಧಾನಿಯವರು ಸಂತೃಪ್ತಿ, ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದೇನೆ, ಹಾನಗಲ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಸೋತಿದ್ದೇವೆ ಎಂದಾಗ ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೇ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲು ಯತ್ನಿಸಿ ಎಂದು ಹೇಳಿದರು ಎಂದರು.

ಡಿಸೆಂಬರ್ ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿಗಳಿಗೆ ಆಹ್ವಾನ ನೀಡಿದಾಗ ಎರಡು ಕಾರ್ಯಕ್ರಮಗಳಾಗಿ ಮಾಡಿ, ಎರಡು ಬಾರಿ ಬರುತ್ತೇನೆ ಎಂದು ಹೇಳಿದ್ದಾರೆಂದರು.