ಜೆಡಿಎಸ್ ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಬ್ರೈನ್ ವಾಶ್ -ಎಚ್.ಡಿ. ಕೆ ಆರೋಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಪಕ್ಷದ ಮುಖಂಡರು, ಶಾಸಕರನ್ನು ಹೈಜಾಕ್ ಮಾಡಿ ಆಪರೇಷನ್ ಮಾಡುವ ಸಲುವಾಗಿ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದು ಈ ವಿಷಯ ಇದೀಗ ಚರ್ಚೆಗೆ ಗ್ರಾಸ ಒದಗಿಸಿದೆ.

9 ದಿನಗಳ ಜನತಾ ಸಂಗಮ ಕಾರ್ಯಗಾರ ಬುದವಾರ ಸಂಜೆ ಮುಕ್ತಾಯವಾದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಮಾಜಿ ಮುಖ್ಯ ಮಂತ್ರಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಾರ ಹೆಸರನ್ನೂ ಹೇಳದೆ ಪರೋಕ್ಷ ವಾಗಿ ವಾಗ್ದಾಳಿ ನಡೆಸಿದರು.

ಕ್ಷೇತ್ರಗಳಲ್ಲಿ ಕೊಂಚ ಬಲ ಇಟ್ಟುಕೊಂಡಿರುವ ಶಾಸಕರು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿ ಅಂಥವರ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಹೆಷ್ ಡಿಕೆ ದೂರಿದರು.

ನಮ್ಮಪಕ್ಷದ ಹಾಲಿ ಶಾಸಕರು, ಮುಖಂಡರಿಗೆ ದೂರವಾಣಿ ಕರೆ ಮಾಡಿ ಸತತವಾಗಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಪದೇಪದೆ ಕರೆ ಮಾಡಿ, ಅವರ ತಲೆ ಕೆಡಿಸಲು ಯತ್ನಿಸುತ್ತಿದ್ದಾರೆ ಸಿಎಂ ಆಗಿದ್ದವರು, ಪುನಾ ಸಿಎಂ ಆಗಲು ಕನಸು ಕಾಣುತ್ತಿರುವವರು ಈ ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೆ ಹನ್ನೊಂದು ಸಲ ಕರೆ ಮಾಡಿ ಏನು ತೀರ್ಮಾನ ಮಾಡಿದ್ರಿ ಅಂತಾ ಕೇಳಿದ್ದಾರೆ. ಇದನ್ನು ಸ್ವತಃ ನನ್ನ ಆತ್ಮೀಯ ಶಾಸಕರೊಬ್ಬರು ನನಗೆ ಆ ಮಾಜಿ ಮುಖ್ಯಮಂತ್ರಿ ಮಾಡಿರುವ ದೂರವಾಣಿ ಕರೆಯ ಲಿಸ್ಟ್ ಅನ್ನು ತೋರಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜತೆ ನಾವು ಸರ್ಕಾರ ಮಾಡಿದ ಬಳಿಕ ನಮ್ಮವರ ಬ್ರೈನ್ ವಾಷ್ ಮಾಡಲಾಗುತ್ತಿದೆ. ಇದರ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಮುಖ್ಯವಾಗಿ ಹಳೆಯ ಮೈಸೂರು ಭಾಗದಲ್ಲಿ ನಮ್ಮ ಮುಖಂಡರು ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ನಮಗೆ ನಮ್ಮ ಪಕ್ಷದ ಶಾಸಕರು ಇದ್ದಾರೆ. ಕಾರ್ಯಕರ್ತರ ಪಡೆ ಇದೆ. ಆದರೆ, ಆ ಪಕ್ಷಕ್ಕೆ ನಾಯಕರ ಕೊರತೆ ಇದೆ. ಬೇರೆ ಗತಿ ಇಲ್ಲದೆ ನಮ್ಮ ಪಕ್ಷದವರಿಗೆ ಗಾಳ ಹಾಕುತ್ತಿದ್ದಾರೆ ಹಾಕಲಿ ಎಂದರು.

ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವರು ಅಲ್ಲಿಗೆ ಹೋಗಲಿ. ಆದರೆ, ಹೋಗುವ ಮುನ್ನ ಅಥವಾ ಹೋದ ಮೇಲೆ ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆಯೋ? ಅವರಿಗೆ ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಲಿ. ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ನಾವು ಅಳುತ್ತ ಕೂರಲು ಆಗುವುದಿಲ್ಲ. ಆದರೂ ಕೆಲವರ ಮನವೊಲಿಸಲು ಸಾಧ್ಯವಾದರೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.