ಮೈಸೂರು: ಬಿಟ್ ಕಾಯಿನ್ ಬಗ್ಗೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ಕಾಂಗ್ರೆಸ್ ನಾಯಕರು ಸುಮ್ಮನೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸಿಗರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್,ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಆರ್ಥಿಕ ಮಂತ್ರಿಯಾಗಿದ್ದವರು. ರೀಡೋ ಅಂದ್ರೆ ಏನು. ರೀಡೋ ಮಾಡಿದವರಿಗೆ ಬಿಟ್ ಕಾಯಿನ್ ಬಗ್ಗೆ ಏನು ಅಂತ ಗೊತ್ತಿದ್ದರೆ ಹೇಳಲಿ ಎಂದು ಒತ್ತಾಯಿಸಿದರು.
15 ದಿವಸ ನಂತರ ಸಾಕ್ಷಿ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ದೊಡ್ಡ ನಾಯಕರು ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದಾರೆ. ಅನವಶ್ಯಕವಾಗಿ ಮುಖ್ಯಮಂತ್ರಿಗಳನ್ನು ಎಳೆಯುತ್ತಿದ್ದಾರೆ. ಅವರು ಬಹಳ ಸಮಾಧಾನದಿಂದ ರಾಜ್ಯವನ್ನು ಕೊಂಡೊಯ್ಯತ್ತಿದ್ದಾರೆ. ಸುಮ್ಮಸುಮನೆ ಏನೇನೊ ಹೇಳುವುದರ ಬದಲು ಇದರ ಬಗ್ಗೆ ನಿಮಗೆ ಗೊತ್ತಿದ್ದರೆ ಸ್ಪಷ್ಟವಾಗಿ ಹೇಳಿ. ಅನಾವಶ್ಯಕವಾಗಿ ಗೊಂದಲ ಎಬ್ಬಿಸಬೇಡಿ ಎಂದುಕಿಡಿಕಾರಿದರು.
ಬಿಟ್ ಕಾಯಿನ್ ಬಗ್ಗೆ ಸಾಕ್ಷಿ ಆಧಾರ ಇಲ್ಲ. ಬಿಟ್ ಕಾಯಿನ್ ಅಂದ್ರೆ ಏನೂ ಅಂತಾ ಯಾರೂ ಹೇಳುತ್ತಲೂ ಇಲ್ಲ. ಎರಡು ಸಾಕ್ಷಿ ಕೊಡಿ. ತನಿಖೆಗೆ ನಾನೇ ಒತ್ತಾಯ ಮಾಡುತ್ತೇನೆ ಎಂದು ಆಗ್ರಹಿಸಿದರು. 2016ರಲ್ಲಿ ಯುಬಿ ಸಿಟಿಯಲ್ಲಿ ಬಿಟ್ ಕಾಯಿನ್ ವಿಚಾರದ ಬಗ್ಗೆ ಗಲಾಟೆ ಆಗಿತ್ತು. ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದಾಗಿನಿಂದನೂ ಇದೆ. ಡಿ ಲಿಮಿಟೇಷನ್ ವಿಚಾರಲ್ಲಿ ಹೊಸ ಭಾಷ್ಯ ಬರೆದವರು ಸಿದ್ದರಾಮಯ್ಯನವರೇ ಹಿಟ್ ಅಂಡ್ ರನ್ ಮಾಡ್ತಿದ್ದಾರೆ. ಯೂತ್ ಕಾಂಗ್ರೆಸ್ ನಲ್ಲಿ ನಲಪಾಡ್ ಗೆದ್ದರೂ ಅಧ್ಯಕ್ಷ ಆಗಲು ಅವಕಾಶ ಕೊಡಲಿಲ್ಲ. ಯಾಕೆ ಕೊಡಲಿಲ್ಲ ಆಪಾದನೆ ಇದೆ ಅಂತ ತಾನೆ ಹಾಗಿದ್ದರೆ ನಲಪಾಡ್ ಮೇಲಿರೋ ಆಪಾದನೆ ಏನು ಎಂಬುದನ್ನ ಹೇಳಿ ಎಂದು ಆಗ್ರಹಿಸಿದರು.
ಶ್ರೀಕಿಯದ್ದು ಹೈಪರ್ ಬ್ರೈನ್, ಅವನು 8ನೇ ಕ್ಲಾಸ್ ನಲ್ಲಿ ಇರುವಾಗಲೇ ಏನೇನೋ ಮಾಡ್ತಾ ಇದ್ದನಂತೆ. ಹ್ಯಾಕಿಂಗ್ ಬಗ್ಗೆ ಆತನಿಗೆ ಅವಾಗಲೇ ಗೊತ್ತಿತ್ತು. ಅವನನ್ನ ಕರೆದು ಬುದ್ಧಿ ಹೇಳಿ ಒಳ್ಳೆಯದಕ್ಕೆ ಬಳಸಿಕೊಳ್ಳಿ ಎಂದು ವಿಶ್ವನಾಥ್ ಇದೇ ವೇಳೆ ಸಲಹೆ ನೀಡಿದರು.
ಪೇಜಾವರ ಶ್ರೀ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಂಸಲೇಖ ಶ್ರೀಗಳ ಬಗ್ಗೆ ಯಾವ ರೀತಿ ಹೇಳಿದ್ದಾರೋ ನಮಗೂ ಅರ್ಥ ಆಗ್ತಿಲ್ಲ. ಹಂಸಲೇಖ ಕೂಡ ಕ್ಷಮೆ ಕೋರಿದ್ದಾರೆ. ಪೇಜಾವರ ಶ್ರೀಗಳ ಜೊತೆ ನನಗೆ ತುಂಬಾ ಆತ್ಮೀಯತೆ ಇತ್ತು. ಶ್ರೀಗಳ ಬಗ್ಗೆ ಅಪಾರ ಗೌರವ ಇದೆ. ಶ್ರೀಗಳ ಬಗ್ಗೆ ಆಹಾರದ ಬಗ್ಗೆ ಮಾತನಾಡಿದ್ದಾರೆ. ಆಹಾರ, ಬಟ್ಟೆ, ದೇವರ ಆರಾಧನೆಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಶ್ರೀಗಳು ಭಿಕ್ಷಾನ್ನದಲ್ಲಿಯೂ ಶಿಷ್ಟಾಚಾರ ಮಾಡಿದವರು ಅಂತವರ ಬಗ್ಗೆ ಯಾರೂ ಮಾತನಾಡಬಾರದು ಎಂದು ಹೇಳುವ ಮೂಲಕ ಹಂಸಲೇಖ ಹೇಳಿಕೆಯನ್ನು ಖಂಡಿಸಿದರು.
ಕಾಂಗ್ರೆಸ್ ನಲ್ಲಿ ವಿಧಾನ ಪರಿಷತ್ ಟಿಕೇಟ್ ಪಡೆಯಲು 15 ಕೋಟಿ ಬೇಕು ಎಂದು ಹೊಸ ಬಾಂಬ್ ಸಿಡಿಸಿದ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೇಟ್ ಬಯಸುವವರಿಗೆ ಈ ಮಾತು ಹೇಳಿದ್ದಾರೆ. ಟಿಕೇಟ್ ಬೇಕಾದರೆ ಒಂದು ಲಕ್ಷ ನಾನ್ ರಿಟನಬಲ್ ಫಂಡ್ ಕೊಡಬೇಕು. 15 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದವರಿಗೆ ಟಿಕೇಟ್ ಎಂದಿದ್ದಾರೆ. ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತದೆ, ಕಾಂಗ್ರೆಸ್ ನಲ್ಲೂ ಕೂಡ ಈಗ ಸಾಮಾಜಿಕ ನ್ಯಾಯ ದೂರಾಗುತ್ತಿದೆ ಎಂದು ವಿಷಾದಿಸಿದರು.
ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್ ನೀಡುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಇನ್ನೂ ಬಿಜೆಪಿಗೆ ಸೇರಿಲ್ಲ ಅವ್ರಿಗೆ ಯಾಕೆ ಟಿಕೇಟ್. ಸಂದೇಶ್ ನಾಗರಾಜ್ ಗೂ ಬಿಜೆಪಿ ಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

