ಅರಗ ಜ್ಞಾನೇಂದ್ರಗೆ ತುರ್ತು ಚಿಕಿತ್ಸೆ ಅಗತ್ಯ -ಡಿ.ಕೆ.ಶಿ

ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಒಬ್ಬ ಹುಚ್ಚ. ಹೀಗಾಗಿ ಏನೇನೋ ಮಾತಾಡುತ್ತಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯ ವಾಡಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಅವರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿ.ಕೆ. ಶಿವಕುಮಾರ್‌  ಗುರುವಾರ ಮಾತನಾಡಿದರು.

ಬಿಟ್ ಕಾಯಿನ್ ಹ್ಯಾಕಿಂಗ್ ಆರೋಪಿ ಶ್ರೀಕಿಯನ್ನು ಬಳಸಿಕೊಂಡು ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಕಾಂಗ್ರೆಸ್ ನಾಯಕರು ತಮಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಲಿಖಿತ ದೂರು ಹೋಗಿದೆ. ಇದು ಅಧಿಕೃತ ಪತ್ರ. ಅದರಲ್ಲಿ ಸಿಎಂ ಕುಟುಂಬದ ಸದಸ್ಯರು, ಹಲವು ಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಸಂಸತ್ ಸದಸ್ಯರು ಸೇರಿದಂತೆ ಹಲವರ ಹೆಸರುಗಳು ಇವೆ. ಅವರು ಹಗರಣದಲ್ಲಿ ಷಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗೃಹ ಸಚಿವರು ಮೊದಲು ಈ ದೂರಿನ ಬಗ್ಗೆ ಸುಮೊಟೋ ಕೇಸು ದಾಖಲಿಸಿ, ತನಿಖೆ ಮಾಡಿಸಲಿ. ಆಮೇಲೆ ಯೂತ್ ಕಾಂಗ್ರೆಸ್ ಬಗ್ಗೆ ಮಾತಾಡಲಿ ಎಂದು ಖಾರವಾಗಿ ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆದಾಗ ಶ್ರೀಕಿ ಜೈಲಿನಲ್ಲಿದ್ದನಲ್ಲಾ, ಅವನು ಹೇಗೆ ನಲಪಾಡ್ ಪರ ರಿಗ್ಗಿಂಗ್ ಗೆ (ನಕಲಿ ಮತದಾನ) ಸಹಾಯ ಮಾಡಲು ಸಾಧ್ಯ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ  ಅದಕ್ಕೇ ನಾನು ಹೇಳಿದ್ದು ಹೋಮ್ ಮಿನಿಸ್ಟರ್ ಒಬ್ಬ ಹುಚ್ಚ ಎಂದು ಶಿವಕುಮಾರ್ ಉತ್ತರಿಸಿದರು.

 ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ, ಏನು ಮಾತನಾಡುತ್ತಿದ್ದೇನೆ ಎಂಬ ಪರಿವೆಯೇ ಇಲ್ಲ. ಹೀಗಾಗಿ ಅವರನ್ನು ಮೊದಲು ನಿಮ್ಹಾನ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದರು.

ಶ್ರೀಕಿ ಜೈಲಿನಲ್ಲಿದ್ದಾಗ ಅವರಿಗೆ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಒದಗಿಸಿ, ಹ್ಯಾಕಿಂಗ್ ಮಾಡಿರಬಹುದು ಎನ್ನಲಾಗುತ್ತಿದೆಯಲ್ಲ ಎಂಬ ಮತ್ತೊಂದು ಪ್ರಶ್ನೆಗೆ  ಅದನ್ನೇ ನಾನೂ ಹೇಳುತ್ತಿರುವುದು. ನನ್ನ ಮಗನಿಗೆ ಕಸ್ಟಡಿಯಲ್ಲಿದ್ದಾಗ ಪೊಲೀಸರು ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎಂದು ಶ್ರೀಕಿ ಅವರ ತಂದೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಶ್ರೀಕಿ ಕೂಡ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾನೆ. ಕೋರ್ಟ್ ಕೂಡ ಈ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಹೇಳಿದರು.

ಶ್ರೀಕಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಎಂದು ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ಅದನ್ನು ಮಾಡಿಲ್ಲ. ಕೋವಿಡ್  ನೆಪವೊಡ್ಡಿ ಬೇರೆ ಕಡೆ ಪರೀಕ್ಷೆ ಮಾಡಲಾಗಿದೆ. ಕೋರ್ಟ್ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಯಾಕಾಗಿ ಬೇರೆ ಕಡೆ ಪರೀಕ್ಷೆ ಮಾಡಿಸಿದರು? ಯಾರು ಇದಕ್ಕೆ ಜವಾಬ್ದಾರರು? ಯಾವ ಮಂತ್ರಿಗಳು ಜವಾಬ್ದಾರರು? ಬೇರೆ ಯಾರೆಲ್ಲ ಇದಕ್ಕೆ ಹೊಣೆಗಾರರು ಎಂಬುದು ಹೊರಬರಬೇಕು ಆದರೆ ಅಪ್ರಬುದ್ಧ, ಜ್ಞಾನವೇ ಇಲ್ಲದ ಗೃಹ ಸಚಿವರು ಶಾಲಾ ಬಾಲಕನಂತೆ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.

ನೀವು ಈ ಬಗ್ಗೆ ಹೋರಾಟ, ಪ್ರತಿಭಟನೆ ಹಮ್ಮಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ನಾನು ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆಯಲ್ಲಿ ನಿರತನಾಗಿದ್ದೇನೆ. ನನ್ನ ಸಹೋದ್ಯೋಗಿಗಳು ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.