ಹುಬ್ಬಳ್ಳಿ: ಪ್ರಮುಖ ಮೂರು ಕೃಷಿ ಕಾಯಿದೆ ಹಿಂಪಡೆದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಾದಿತ ಮೂರು ಕೃಷಿ ಕಾಯಿದೆ ಹಿಂಪಡೆಯುವ ನಿರ್ಧಾರ ಶ್ಲಾಘನೀಯ ಎಂದರು.
ಕಳೆದ 15 ತಿಂಗಳಿನಿಂದ ರೈತರು ಈ ಬಗ್ಗೆ ಹೋರಾಟ ಮಾಡುತ್ತಿದ್ದರು. ಅವರ ಹೋರಾಟಕ್ಕೆ ಫಲ ಸಿಕ್ಕಿದೆ. ದೇಶದ ರೈತರ ಪರವಾಗಿ ನಾನು ಪ್ರಧಾನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಯುಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿಲ್ಲ ರೈತರ ಹಿತ ನೋಡಿಕೊಂಡು ತೀರ್ಮಾನ ಕೈಗೊಂಡಿದ್ದಾರೆ ಎಂದು ಬಿಎಸ್ ವೈ ತಿಳಿಸಿದರು.
ರೈತರ ದೊಡ್ಡ ಪ್ರಮಾಣದ ಹೋರಾಟ ಪ್ರಧಾನಿಗೆ ಅರ್ಥ ಆಗಿದೆ. ಇದರಲ್ಲಿ ಸೋಲು ಗೆಲುವು ಅನ್ನೋ ಪ್ರಶ್ನೆ ಇಲ್ಲ.
ತೀರ್ಮಾನ ತಡವಾದರೂ ಇದು ಐತಿಹಾಸಿಕ ತೀರ್ಮಾನವನ್ನು ರೈತರ ರಕ್ಷಣೆಗೆ ಪ್ರಧಾನಿ ಕ್ರಮ ಕೈಗೊಂಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಬಿಟ್ ಕಾಯಿನ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿ ಎಸ್ ವೈ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಬಿಟ್ ಕಾಯಿನ್ ನಲ್ಲಿ ರಾಕೇಶ ಸಿದ್ದರಾಮಯ್ಯ ಭಾಗಿಯಾಗಿದ್ದರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರೇ ಭಾಗಿಯಾಗಿದ್ದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಆ ಸಂದರ್ಭದಲ್ಲಿ ಯಾರು, ಯಾರು ಇದ್ದರು ಎಂಬುದರ ಬಗ್ಗೆಯೂ ತನಿಖೆ ಆಗಲಿ ಎಂದು ಬಿಎಸ್ ವೈ ಹೇಳಿದರು.

