ದೆಹಲಿ: ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ. ಇದು ದೇಶದ ಅನ್ನದಾತ ಮತ್ತು ಕಾಂಗ್ರೆಸ್ ನ ಹೋರಾಟಕ್ಕೆ ಸಂದ ಚಾರಿತ್ರಿಕ ಜಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳು ಎಪಿಎಂಸಿ ಮಾರುಕಟ್ಟೆಗೆ ಮಾರಕವಾಗಿದ್ದವು. ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಿರಲಿಲ್ಲ. ದೇಶದ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶ, ಒಪ್ಪಂದ ಕೃಷಿ ಸೇರಿದಂತೆ ಇತರೆ ಅಂಶಗಳು ರೈತರ ಭವಿಷ್ಯವನ್ನೇ ಸಮಾಧಿ ಮಾಡುತ್ತಿದ್ದವು ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಇದೀಗ ಅನ್ನದಾತನ ಮುಂದೆ ಮಂಡಿಯೂರಿದೆ. ದೇಶದ ಅನ್ನದಾತನನ್ನು ಎದುರುಹಾಕಿಕೊಂಡು ಉಳಿದವರಿಲ್ಲ. ಅಂದು ಬ್ರಿಟೀಷರು ರೈತರ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಕಾಲ್ಕಿತ್ತರು. ಇಂದು ಬಿಜೆಪಿ ಅದೇ ತಪ್ಪು ಮಾಡಿ ಬುದ್ಧಿ ಕಲಿತಿದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಎಂದೆಂದಿಗೂ ರೈತರು ಸೇರಿದಂತೆ ಎಲ್ಲ ವರ್ಗವರ ಜತೆಗೆ ಇರಲಿದೆ. ಅವರ ಹಿತಾಸಕ್ತಿಗೆ ಧಕ್ಕೆಯಾದರೆ ಹೋರಾಟ ಮಾಡಲಿದೆ ಎಂದೂ ಶಿವಕುಮಾರ್ ಅವರು ತಿಳಿಸಿದ್ದಾರೆ.

