ಅನ್ನದಾತ ಆಪತ್ತಿನಲ್ಲಿ: ರೈತರ ನೆರವಿಗೆ ಧಾವಿಸಲು ಹೆಚ್.ಡಿ.ಕೆ ಆಗ್ರಹ

ಬೆಂಗಳೂರು: ಕೋವಿಡ್ ವೇಳೆ ತೀವ್ರ ಸಂಕಷ್ಟಕ್ಕೀಡಾಗಿದ್ದ ರಾಜ್ಯದ ರೈತರು,ಸತತ ಮಳೆಯಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದು ಸರಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಶನಿವಾರ ಬೆಳಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ರಾಜ್ಯಾದ್ಯಂತ 7.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದ್ದು, ಅನ್ನದಾತ ಆಪತ್ತಿಗೆ ಸಿಲುಕಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಅಧಿಕಾರಿಗಳೇ ನೀಡಿರುವ ಮಾಹಿತಿಯಂತೆ ಜುಲೈ-ನವೆಂಬರ್ ನಲ್ಲಿ 7.31 ಲಕ್ಷ ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಮಳೆ ಪಾಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಹಳೆ ಮೈಸೂರು, ಬಯಲು ಸೀಮೆ ಸೇರಿ ರಾಜ್ಯದ ಉದ್ದಗಲಕ್ಕೂ ಮಳೆಯ ರುದ್ರನರ್ತನ ಮುಂದುವರಿದೆ.
ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟಗಳು ಪೂರ್ಣ ನಾಶವಾಗಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಪ್ರಳಯವನ್ನೇ ಸೃಷ್ಟಿಸಿದೆ. ಕೆರೆಕಟ್ಟೆಗಳು ಒಡೆದು ಗ್ರಾಮಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಹಳ್ಳಿಗಳು ನಡುಗಡ್ಡೆಗಳಾಗಿವೆ. ತೋಟಗಳು ಕೆರೆಗಳಾಗಿವೆ.
ಕೋಲಾರ ಜಿಲ್ಲೆ ಒಂದರಲ್ಲೇ ಅತಿ ಹೆಚ್ಚು ಬೆಳೆ ನಾಶವಾಗಿದೆ. ಮಾಧ್ಯಮಗಳಿಗೆ ಅಧಿಕಾರಿಗಳೇ ಕೊಟ್ಟಿರುವ ಮಾಹಿತಿಯಂತೆ ಆ ಒಂದು ಜಿಲ್ಲೆಯಲ್ಲೇ 34,447 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ಮಳೆ ನುಂಗಿದೆ. 14 ಜಿಲ್ಲೆಗಳಲ್ಲಿ 48,000 ಹೆಕ್ಟೇರ್?ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಫಸಲು ರೈತರ ಕೈಗೆ ಸಿಕ್ಕಿಲ್ಲ.

ನಮ್ಮ ರಾಜ್ಯದ ರೈತರು ಇಷ್ಟು ದೊಡ್ಡ ಸಂಕಷ್ಟಕ್ಕೆ ಹಿಂದೆಂದೂ ಸಿಲುಕಿರಲಿಲ್ಲ. ಈ ವಿಷಯದಲ್ಲಿ ರಾಜ್ಯ ಸರಕಾರ ಮಾಡಿರುವುದೇನು? ಸಚಿವರು ಎಲ್ಲಿದ್ದಾರೆ? ಅಧಿಕಾರಿಗಳೇನು ಮಾಡುತ್ತಿದ್ದಾರೆ? ಸರಕಾರ ಸಭೆಗಳಿಗೆ ಸೀಮಿತವಾದರೆ ಪ್ರಯೋಜನ ಶೂನ್ಯ. ಅಧಿಕಾರಿಗಳು ಹಳ್ಳಿಗಳತ್ತ ನಡೆಯಲಿ ಎಂದು ಸಲಹೆ ನೀಡಿದ್ದಾರೆ.

ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿಗಳೆಂದು ನೇಮಕವಾದ ಸಚಿವರು ಎಲ್ಲಿ? ಅನೇಕ ಸಚಿವರಂತೂ ಜಿಲ್ಲೆಗಳ ಕಥೆ ಹಾಗಿರಲಿ, ಅವರ ಕಚೇರಿಗಳಲ್ಲೇ ಪತ್ತೆ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ಸಚಿವರನ್ನು ಜಿಲ್ಲೆಗಳಿಗೆ ಅಟ್ಟಬೇಕು. ಮಳೆ-ಬೆಳೆ ಪರಿಹಾರ ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇಷ್ಟೆಲ್ಲ ಅನಾಹುತ ಆಗುತ್ತಿದ್ದರೂ ಕೃಷಿ ಸಚಿವರು, ಅವರ ಇಲಾಖೆ ಹಾಗೂ ಕಂದಾಯ ಇಲಾಖೆ ಏನು ಮಾಡುತ್ತಿದೆ? ಈಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆಯಾ? ಬೆಳೆ ವಿಮೆ ಪರಿಸ್ಥಿತಿ ಏನು? ಕಾಟಾಚಾರಕ್ಕೆ ಸರ್ವೇ ಮಾಡಿ ಸಭೆಗಳಲ್ಲಿ ಕಾಲಹರಣ ಮಾಡುವುದು ಬೇಡ ಎಂದು ಟ್ವಿಟರ್ ನಲ್ಲೇ ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಜನಸ್ವರಾಜ್ ಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ. ಕೃಷಿ ಕಾಯ್ದೆ ವಾಪಸ್ ಪಡೆದೆವು ಎಂದು ಬೀಗುತ್ತಾ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರಕಾರ ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು ಎಂದು ಹೇಳಿದ್ದಾರೆ.