ನ. 28ರವರೆಗೆ ಮಳೆ ಸಾಧ್ಯತೆ : ಮುನ್ನೆಚ್ಚರಿಕೆಗೆ ಸೂಚನೆ

ಬೆಂಗಳೂರು : ಮಳೆ ನಿಂತಿದೆ ಆರಾಮಗಿರಬಹುದು ಅಂದುಕೊಂಡರೆ ಅದು ತಪ್ಪು ಕಲ್ಪನೆ.ಶುಕ್ರವಾರ ದಿಂದ ನ.28 ರವರೆಗೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ಕೊಟ್ಟಿರುವುದರಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೂ ಎಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತದ ಭೀತಿ ಎದುರಾಗಿರುವುದರಿಂದ  ಮಳೆಯಿಂದ ಸೃಷ್ಟಿಯಾಗುವ ಅವಾಂತರಗಳ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವಂತೆ  ಬಿಬಿಎಂಪಿ ಅಧಿಕಾರಿಗಳು  ಮತ್ತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ಮುಂದಿನ 3 ದಿನ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನಲ್ಲಿ ಮಳೆಯಾಗಲಿದೆ.

ಕೇರಳದಲ್ಲಿ  ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ರಾಜ್ಯಗಳಾದ ತಮಿಳುನಾಡು , ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಮಳೆಯಾಗಲಿದೆ.

ಮಳೆ ಸಂಬಂಧಿತ ಘಟನೆಗಳಿಂದಾಗಿ ಪ್ರವಾಹದಂತಹ ಪರಿಸ್ಥಿತಿಗಳು ಮತ್ತು ಸಾವು- ನೋವುಗಳು ಉಂಟಾಗಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ನಮ್ಮ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ , ಉಡುಪಿ, ಬೆಳಗಾವಿ, ಬೀದರ್,ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಮಳೆಯಾಗಲಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ,ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲೂ ಮಳೆಯಾಗಲಿದೆ.  ಮೈಸೂರು ಬೆಂಗಳೂರಿನಲ್ಲಿ ತಂಡಿ ಗಾಳಿ ಬೀಸುತ್ತಿದೆ.

ಬಾಗಲಕೋಟೆ, ಕೊಪ್ಪಳ,ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣ ಹವೆ ಮುಂದುವರಿಯಲಿದೆ. ಈ ತಿಂಗಳ 29ರ ವರೆಗೂ ಕರ್ನಾಟಕದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.