ಡಾ. ನಾರಾಯಣ ಗೌಡರ ದಿಟ್ಟ ಕ್ರಮ; ಕೆಜಿ ರೇಷ್ಮೆ ಗೂಡಿಗೆ ಬರೋಬ್ಬರಿ 785 ರೂ.!

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ಒಂದು ಕೆಜಿಗೆ 785 ರೂ. ತಲುಪಿರುವುದು ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿದೆ.

ಇದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತೆಗೆದುಕೊಂಡ ಕ್ರಮಗಳು ಕಾರಣ.

300 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ರೇಷ್ಮೆ ಗೂಡಿನ ದರ ಕೊರೊನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

ಕೊರೊನಾ ಸಂದರ್ಭದಲ್ಲಿ ರೀಲರುಗಳು ರೇಷ್ಮೆ ಗೂಡು ಖರೀದಿಸದ ಕಾರಣ ರೇಷ್ಮೆ ದರ ಕುಸಿದಿತ್ತು.

ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯಿಂದಾಗಿ ಸೂಕ್ತ ದರ ಸಿಗದೇ ರೇಷ್ಮೆ ಬೆಳೆಗಾರರು ವಂಚನೆಗೊಳಗಾಗುತ್ತಿದ್ದರು.

ಡಾ. ನಾರಾಯಣಗೌಡ ಅವರು ರೇಷ್ಮೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡರು.

ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದ್ದಲ್ಲದೆ ರೈತರ ಹೊಲಗಳಿಗೂ ಹೋಗಿ ರೇಷ್ಮೆ ಬೆಳೆಗಾರರ ಜೊತೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ರೇಷ್ಮೆ ಮಾರುಕಟ್ಟೆಗಳಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯ, ದಲ್ಲಾಳಿಗಳ ಕಿರುಕುಳ, ಮೋಸ ಸೇರಿದಂತೆ ಹಲವು ಸಮಸ್ಯೆಗಳನ್ನು ರೇಷ್ಮೆ ಬೆಳೆಗಾರರು ಸಚಿವರ ಗಮನಕ್ಕೆ ತಂದಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು ರೇಷ್ಮೆ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಡಿವಾಣಕ್ಕೆ ಸಚಿವ ಡಾ.ನಾರಾಯಣಗೌಡ ಅವರು ದಿಟ್ಟ ಕ್ರಮಗಳನ್ನು ತೆಗೆದುಕೊಂಡರು.

ರೇಷ್ಮೆ ಗೂಡು ಕಳ್ಳತನ ತಪ್ಪಿಸಲು ರೇಷ್ಮೆ ಮಾರುಕಟ್ಟೆಯಲ್ಲಿ ಸಿಸಿಟಿವಿ ಅಳವಡಿಸುವ ಜತೆಗೆ ಪೆÇಲೀಸ್ ಇಲಾಖೆಯ ನೆರವಿನೊಂದಿಗೆ ಅಕ್ರಮಗಳು ನಡೆಯದಂತೆ ಕ್ರಮ ತೆಗೆದುಕೊಂಡಿದ್ದರು.

ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆಗೆ ತೆರಳುವಾಗ ಪೆÇಲೀಸರು ಹಾಗೂ ಹಲವರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲು ವಿಶೇಷ ಗುರುತಿನ ಚೀಟಿ ನೀಡುವ ಅತ್ಯಂತ ಪ್ರಮುಖ ನಿರ್ಧಾರ ಕೈಗೊಂಡರು.

ಭ್ರಷ್ಟಾಚಾರ ಹಾಗೂ ಅವ್ಯವಹಾರ ತಡೆಗಟ್ಟಲು ಇ – ಪೇಮೆಂಟ್ ಜಾರಿಗೆ ತರಲಾಗಿದೆ. ರೇಷ್ಮೆ ಗೂಡು ಮಾರಾಟಕ್ಕೆ ತೊಂದರೆ ಆಗದಂತೆ ರೇಷ್ಮೆ ಮಾರುಕಟ್ಟೆಗಳನ್ನು ವಿಸ್ತರಣೆಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ

ಸಚಿವ ಡಾ. ನಾರಾಯಣಗೌಡರ ಈ ಎಲ್ಲಾ ದಿಟ್ಟ ಕ್ರಮಗಳಿಂದಾಗಿ ರೇಷ್ಮೆ ಬೆಳೆಗಾರರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಕೆಜಿ ರೇಷ್ಮೆ ಗೂಡು 785 ರೂಪಾಯಿ ಮುಟ್ಟಿದೆ.