ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಯಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅವರು ಯಾವುದೇ ಪಕ್ಷದವರಾಗಲಿ ಶಿಕ್ಷೆಯಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಸುವ ಮುಖ್ಯಮಂತ್ರಿಗಳ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದ ಅಭ್ಯರ್ಥಿಗೆ ಸಿಂಗಲ್ ವೋಟ್ ಹಾಕಲು ಬೆಂಬಲಿತರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ ಅವರು ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ ಎಂದರು.
ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ವಿಧಾನ ಪರಿಷತ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇರೋದು ಬಿಜೆಪಿಯಲ್ಲಿ. ಅವರು ಪಕ್ಷೇತರವಾಗಿ ಕಣಕ್ಕೆ ಇಳಿದಿರುವುದರಿಂದ ಬಿಜೆಪಿಗೆ ವ್ಯತ್ಯಾಸ ಆಗಬಹುದು ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೇ ನೇರ ಹಣಾಹಣಿ ಇದೆ. ನಾವು ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದೇವೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.
ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಸೇರಲ್ಲ. ಅವರು ಕಾಂಗ್ರೆಸ್‍ಗೆ ಬರುವುದಾಗಿಯೂ ಕೇಳಿಲ್ಲ. ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಸಿದ್ದು ಉತ್ತರಿಸಿದರು.
ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ರಾಜ್ಯ ಸರ್ಕಾರವನ್ನು ವಜಾ ಮಾಡಲಿ ಎಂದು ಸವಾಲು ಹಾಕಿದರು.

