ಬೆಂಗಳೂರು: ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು ಹರಡದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಶನಿವಾರ ಮಾತನಾಡಿ, ಕೋವಿಡ್ ಲಸಿಕೆಯನ್ನು ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡುಬಂದಿಲ್ಲ. ಇದಕ್ಕಾಗಿ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.
ವಿಮಾನ ನಿಲ್ದಾಣಗಳಲ್ಲಿ ಕ್ರಮ ವಹಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೂ ಅಲ್ಲಿ ನಿಯೋಜಿಸಲಾಗಿದೆ. ಹೊಸ ವೈರಾಣು ಹರಡುವ ವೇಗ ಹೆಚ್ಚಿದೆ ಎಂದು ತಿಳಿದುಬಂದಿದೆ. ಆದರೆ ಇದರ ತೀವ್ರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಹೆಚ್ಚು ಆತಂಕಪಡಬೇಕಿಲ್ಲ. ನಮ್ಮ ದೇಶದಲ್ಲಿ ಈ ರೀತಿಯ ಹೊಸ ವೈರಾಣು ಕಂಡುಬಂದಿಲ್ಲ. ಆದರೂ ಎಲ್ಲರು ಕೋವಿಡ್ ನ ಎರಡೂ ಡೋಸ್ ಲಸಿಕೆಗಳನ್ನು ಪಡೆಯಬೇಕು. ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಧಾರವಾಡದ ಕಾಲೇಜಿನಲ್ಲಿ ಸಮಾರಂಭ ನಡೆದ ವೇಳೆ ಕೋವಿಡ್ ಹರಡಿದೆ ಎನ್ನಲಾಗಿದೆ. ಸುಮಾರು 2,000 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 281 ವಿದ್ಯಾರ್ಥಿಗಳ ಮಾದರಿ ಪಾಸಿಟಿವ್ ಆಗಿದೆ. ಇನ್ನೂ ಹಲವರ ಪರೀಕ್ಷಾ ವರದಿ ಬರಬೇಕಿದೆ. ಆದರೆ ಪಾಸಿಟಿವ್ ಆದವರಿಗೂ ಹೆಚ್ಚು ತೀವ್ರತೆ ಇಲ್ಲ. ಇದರಲ್ಲಿ ಕೆಲವನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಡಿಸೆಂಬರ್ ಆರಂಭದಲ್ಲಿ ಈ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದರು.
ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಅವರೆಲ್ಲರೂ ಲಸಿಕೆ ಪಡೆಯಬೇಕು ಎಂದು ಕೋರಿದರು.
ಸೋಮವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಂತರ ಚರ್ಚೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಕಳೆದೆರಡು ವರ್ಷದಿಂದ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದರು.
ಔಷಧಿ ಖರೀದಿ: ಔಷಧಿ ಖರೀದಿ ಕುರಿತು ಸಭೆ ನಡೆಸಲಾಗಿದೆ. ಔಷಧಿಗಾಗಿ ಸುಮಾರು 38 ಕೋಟಿ ರೂಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಕೋವಿಡ್ ನಿಂದಾಗಿ ಜನರಲ್ ಔಷಧಿಗಳನ್ನು ಖರೀದಿಸುವುದು ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಕೋರ್ಟ್ ನಲ್ಲೂ ಪ್ರಕರಣ ಇದ್ದಿದ್ದರಿಂದ ಕೆಲ ಟೆಂಡರ್ ಗಳೂ ಆಗಿರಲಿಲ್ಲ. ಸ್ಥಳೀಯವಾಗಿಯೇ ಔಷಧಿ ಖರೀದಿಸಲು ಹಣ ನೀಡಲಾಗಿದೆ. ತಾಲೂಕು, ಜಿಲ್ಲಾಸ್ಪತ್ರೆ ಎಲ್ಲ ಆಸ್ಪತ್ರೆಗಳಲ್ಲಿ ಎರಡು ಮೂರು ದಿನಗಳಲ್ಲಿ ಔಷಧಿ ದೊರೆಯಲಿದೆ. ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು.

