ತುಮಕೂರು: ಕೇರಳದಿಂದ ಬರುವ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ತೀವ್ರನಿಗಾ ವಹಿಸುವಂತೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾದ 3 ನೇ ಅಲೆ ಹರಡದಂತೆ ನಾವು ನಿಗಾವಹಿಸಿದ್ದೇವೆ, ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ, ಕೊರೊನಾ ಸೋಂಕಿತರನ್ನು ನಾವು ಕ್ವಾರಂಟೈನ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಹೊರದೇಶದಿಂದ ಬರುತ್ತಿರುವವರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿ ಅವರಲ್ಲಿ ನೆಗೆಟಿವ್ ರಿಪೋಟ್ ಇದ್ದರೆ ಮಾತ್ರ ಹೊರಬಿಡುತ್ತೇವೆ. ಇಲ್ಲದಿದ್ದರೆ ಅವರನ್ನು ಕ್ವಾರಂಟೈನ್ ಮಾಡಿ ಅವರ ಆರೊಗ್ಯದ ಮೇಲೆ ನಿಗಾ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಹೊಸದಾಗಿ ಕಾಣಿಸಿಕೊಂಡಿರುವ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕನ್ನು ಪತ್ತೆ ಹಚ್ಚಲು ಪ್ರಯತ್ನಗಳು ಕೂಡ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಹೇಳಿದೆ , ಪ್ರಧಾನಿಗಳು ಕೊಟ್ಟಿರುವ ಕ್ರಮಗಳಿಗೆ ಅನುಗುಣವಾಗಿ ನಮ್ಮ ರಾಜ್ಯದಲ್ಲಿ ಮೊದಲೇ ಮುಂಜಾಗೃತ ಕ್ರಮಗಳನ್ನು ಪ್ರಾರಂಭ ಮಾಡಿದ್ದೇವೆ, ಶಾಲಾ ಕಾಲೇಜುಗಳ ಮೇಲೂ ನಾವು ಗಮನವನ್ನು ಇಟ್ಟಿದ್ದೇವೆ. ಕೆಲವು ಸೂಚನೆಗಳನ್ನು ಕಾಲೆಜುಗಳಿಗೂ ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

