ಅಕ್ರಮ ಚಟುವಟಿಕೆ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ನಡೆಯುವುದು ಮುಂದುವರಿದಿದೆ. ಅದರ ಜತೆಗೆ ಪದೇ ಪದೇ ದಾಳಿ ಕೂಡಾ ನಡೆಯುತ್ತಲೇ ಇದೆ. ಆದರೂ ಕಡಿವಾಣ ಮಾತ್ರ ಇದ್ದಂತಿಲ್ಲ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಕೈದಿಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಈಗ ಮತ್ತದೇ ಆರೋಪ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ಬೆಳಂಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ.

ಜೈಲಿನಲ್ಲಿದ್ದುಕೊಂಡೇ ಖೈದಿಗಳು ಮೊಬೈಲ್ ಬಳಸುತ್ತಿದ್ದು, ಅಲ್ಲಿಂದ ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದರು, ಮಾದಕ ವಸ್ತುವನ್ನು ಬಳಸುತ್ತಿದ್ದಾರೆಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸಿಸಿಬಿ ವಿಶೇಷ ತಂಡ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದೆ.

ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 100 ಜನ ಪೊಲೀಸ ಸಿಬ್ಬಂದಿ ದಾಳಿ ಮಾಡಿದ್ದು ಕೈದಿಗಳ ಬಳಿ ಮೊಬೈಲ್ ಗಳು, ಸಿಮ್ ಕಾರ್ಡ್ ಹಾಗೂ ಗಾಂಜಾ ಸೇದುವ ಪೈಪ್ ಗಳು, ಪೆನ್ ಡ್ರೈವ್ ಗಳನ್ನು ಪತ್ತೆ ಮಾಡಿದ್ದಾರೆ.

ಸಿಸಿಬಿ ಪೊಲೀಸರು ದಾಳಿ ಮಾಡಿರುವ ವಿಷಯ ತಿಳಿದ ಕೂಡಲೇ ಜೈಲಾಧಿಕಾರಿಗಳು ಆಗಮಿಸಿದ್ದು ಸಿಸಿಬಿ ಪೊಲೀಸರ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

ಪ್ರತಿ ಬ್ಯಾರಕ್ ನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಹಳೇ ರೌಡಿ ಶೀಟರ್ಸ್ ಗಳನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.