ರಾಜ್ಯದಲ್ಲಿ ಯಾವುದೇ ಚಟುವಟಿಕೆ ಮೇಲೂ ನಿರ್ಬಂಧ ಇಲ್ಲ -ಡಾ. ಸುಧಾಕರ್

ಬೆಂಗಳೂರು: ವಿದೇಶಗಳಲ್ಲಿ ಹೊಸ ರೂಪಾಂತರಿ ತಳಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಎರಡನೆ ಡೋಸ್ ಲಸಿಕೆ ಕೆಯನ್ನು ಪೂರ್ಣಪ್ರಮಾಣದಲ್ಲಿ ಕೊಡಲು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಎಲ್ಲರಿಗೂ ಪೂರ್ಣಪ್ರಮಾಣದಲ್ಲಿ ಲಸಿಕೆ ಕೊಡಬೇಕಾಗಿದೆ. ಮೂರನೇ ಅಲೆ ಇದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಓಮಿಕ್ರಾಮ್ ವೈರಸ್ ಕೂಡ ದಾಂಗುಡಿ ಇಟ್ಟಿಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಸೋಮವಾರ 12 ದೇಶಗಳಲ್ಲಿ ಹೊಸ ತಳಿ ಹರಡಿದೆ ಎಂದು ಹೇಳಲಾಗಿತ್ತು, ಆದರೆ ಮಂಗಳವಾರ ಸುಮಾರು 18 ದೇಶಗಳಲ್ಲಿ ರೂಪಾಂತರಿ ತಳಿ ಹರಡಿರುವುದು ಗೊತ್ತಾಗಿದೆ. ಹಾಗಾಗಿ ಬೆಂಗಳೂರು-ಮೈಸೂರು ಸೇರಿ ನಮ್ಮ ಎಲ್ಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರನ್ನು ಹಾಗೂ ಬೇರೆ ದೇಶಗಳಿಂದ ಬರುವವರ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕೇರಳ ಗಡಿಯಲ್ಲಿ ಅತಿ ಹೆಚ್ಚು ಎಚ್ಚರ ವಹಿಸುವಂತೆ ಈಗಾಗಲೇ ಸಿಎಂ ಸೂಚಿಸಿದ್ದಾರೆ. ವಿದೇಶಗಳಿಂದ ಬಂದವರಿಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ನೆಗೆಟಿವ್ ಬಂದಿದ್ದರೆ ಹೀಗೆ ಕ್ರಮ ತೆಗೆದುಕೊಳ್ಳಬೇಕು ಪಾಸಿಟಿವ್ ಇದ್ದರೆ ಎಷ್ಟು ದಿನ ಕ್ವಾರೆಂಟೈನಲ್ಲಿ ಅವರನ್ನು ಇರಿಸಬೇಕು ಎಂಬುದೆಲ್ಲದರ ಬಗ್ಗೆ ಮಂಗಳವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಸಂಪೂರ್ಣವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ರೂಪಾಂತರಿ ತಳಿ ಜಾಸ್ತಿ ಇದ್ದರೂ ಆತಂಕಪಡುವ ಅಗತ್ಯ ಇಲ್ಲ, ಆದರೆ ಅದರ ತೀವ್ರತೆ ಎಷ್ಟಿದೆ ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ. ಹಾಗೆಂದು ಎಲ್ಲಾ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ರೂಪಾಂತರಿ ತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಸರಿಯಾದ ವರದಿ ಕೊಟ್ಟಿಲ್ಲ. ಡಿಸೆಂಬರ್ 1 ಅಥವಾ 2 ರಂದು ವರದಿ ಕೊಡುತ್ತಾರಂತೆ ಆನಂತರ ನೋಡಿಕೊಂಡು ನಮ್ಮ ಚಟುವಟಿಕೆಗಳ ಮೇಲೆ ಕ್ರಮ ತೆಗೆದು ಕೊಳ್ಳಬೇಕಾ ಬೇಡವೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಈಗ ಸದ್ಯಕ್ಕೆ ಯಾವುದೇ ಚಟುವಟಿಕೆ ಮೇಲೂ ನಿರ್ಬಂಧ ಹೇರುವುದಿಲ್ಲ. ಮುಖ್ಯಮಂತ್ರಿಗಳು ಕೂಡ ಇದನ್ನೇ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಪಾಸಿಟಿವ್ ಇದೆ ಅದರಲ್ಲಿ 63 ವರ್ಷದ ಒಬ್ಬರಿಗೆ ರೂಪಾಂತರಿ ತಳಿ ಇದೆ ಎಂದು ಗೊತ್ತಾಗಿದೆ, ಆದರೆ ಅದರ ತೀವ್ರತೆ ಖಂಡಿತವಾಗಿಯೂ ಅವರ ಮೇಲೆ ಪ್ರಭಾವ ಬೀರಿಲ್ಲ.ಅವರ ವರದಿಯನ್ನು ಜಿನೊವಿಕ್ ಸಿಕ್ವೆನ್ಸ್ ಸಂಸ್ಥೆ ಕಳಿಸಬೇಕಾಗಿದೆ ಈಗ ಸದ್ಯಕ್ಕೆ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಚಿವರು ಹೇಳಿದರು.