ಡಿಕೆಶಿಗೆ ಈಶ್ವರಪ್ಪ ತಿರುಗೇಟು

ಮಂತ್ರಾಲಯ: ನಮಗೆ ಅಧಿಕಾರದ ದಾಹ ಇದೆ, ಇಲ್ಲ ಅಂದೋರು ಯಾರು ನಾವೇನು ಸನ್ಯಾಸಿಗಳಾ ಎಂದು ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಂತ್ರಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಅಧಿಕಾರವನ್ನು ಇಟ್ಟುಕೊಂಡು ರಾಷ್ಟ್ರೀಯ ವಿಚಾರಗಳಿಗೆ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರುಗಳ ಹಾಗೆ ನಾವೇನು ಸಿಎಂ ಸ್ಥಾನಕ್ಕೆ ಒಳಗೊಳಗೆ ಸಂಚು ಮಾಡಿ ಜಗಳವಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಾನು ಸ್ವಾಭಾವಿಕವಾಗಿ ಕೊಪ್ಪಳ, ಬೆಳಗಾವಿ, ರಾಯಚೂರು ಭಾಗದಲ್ಲಿ ಬಂದಂತ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಮಾಡುವುದು ಅಭ್ಯಾಸ ಈಗಲೂ ಹಾಗೆ ಬಂದಿದ್ದೇನೆ ಎಂದರು.

ಡಿ. 12ರಂದು ಬೆಂಗಳೂರಿನಲ್ಲಿ ಒಬಿಸಿ ಮೋರ್ಚಾ ಸಮಾವೇಶ ನಡೆಯುತ್ತಿದೆ. ಇದಕ್ಕೆ ರಾಜ್ಯಾದ್ಯಂತ ನಾನು ಮತ್ತು ನೆ.ಲ.ನರೇಂದ್ರ ಬಾಬು ಸೇರಿದಂತೆ ಉಳಿದ ಎಲ್ಲ ನಾಯಕರು ಪ್ರವಾಸ ಮಾಡುತ್ತಿದ್ದೇವೆ. ಕೊಪ್ಪಳ, ಬಳ್ಳಾರಿ, ರಾಯಚೂರು ಮೂರು ಜಿಲ್ಲೆಯ ಸಮಾವೇಶಗಳನ್ನು ಮುಗಿಸಿಕೊಂಡು ಬಂದಿದ್ದೇವೆ. ಇದೀಗ ರಾಯರ ದರ್ಶನವನ್ನು ಪಡೆದಿದ್ದೇವೆ. ಬುಧವಾರ ಗುಲ್ಬರ್ಗ ಕಡೆ ಹೋಗುತ್ತೇವೆ ಎಂದು ತಿಳಿಸಿದರು.

ಈಶ್ವರಪ್ಪ ನವರ ನಾಲಿಗೆ ಹತೋಟಿ ತಪ್ಪುತ್ತಿದೆ ಎಂದು ದಾವಣಗೆರೆಯಲ್ಲಿ ಎಚ್.ಎಂ ರೇವಣ್ಣ ಹೇಳಿದ್ದಾರಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ನಾಲಿಗೆ ಯಾವಗಾಲು ಸ್ಪಷ್ಟವಾಗಿದೆ ಯಾವುದೇ ಕಾರಣಕ್ಕೂ ನಾಲಿಗೆ ಹರಿಬಿಡುವುದಿಲ್ಲ, ತಪ್ಪುಗಳನ್ನು ಮಾತ್ರ ನಾನು ನೇರವಾಗಿ ಹೇಳುತ್ತೇನೆ. ಅದನ್ನು ಅವರು ಹಾಗೆಂದು ತಿಳಿದುಕೊಂಡರೆ ಅದು ಅವರ ಹಣೆಬರಹ ನಾನು ಏನು ಮಾಡೋಕಾಗಲ್ಲ ಎಂದು ಉತ್ತರಿಸಿದರು.

ನನ್ನ ಚಿಂತನೆ, ನನ್ನ ಭಾಮನೆ, ನನ್ನ ತೀರ್ಮಾನಕ್ಕೆ ಯಾರೂ ಅಡ್ಡ ಬರೋದಕ್ಕೆ ಆಗಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಅಧಿಕಾರದ ದಾಹವಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನಮಗೆ ಅಧಿಕಾರದ ದಾಹವಿದೆ, ನಾವೇನು ಸನ್ಯಾಸಿಗಳಾ, ಇವತ್ತಿನಿಂದ ಅಲ್ಲ ಎಷ್ಟು ವರ್ಷಗಳಿಂದ ಈ ಸಂಘಟನೆಯನ್ನು ಕಟ್ಟಿಕೊಂಡು ಬಂದಿದ್ದೇವೆ. ಈಗ ಅಧಿಕಾರವನ್ನು ಇಟ್ಟುಕೊಂಡು ರಾಷ್ಟ್ರೀಯ ವಿಚಾರಗಳಿಗೆ ಬೆಂಬಲ ಕೊಡುತ್ತೇವೆ. ಕಾಂಗ್ರೆಸ್ ನವರ ಹಾಗೆ ಒಳ ಸಂಚು ಮಾಡಿ ಜಗಳವಾಡುತ್ತಿಲ್ಲ ಎಂದು ಪುನರುಚ್ಚರಿಸಿದರು.