ಎನ್‍ಇಪಿ ಭಾರತ ಕೇಂದ್ರಿತ ಸಂಶೋಧನೆ, ನಾವೀನ್ಯತೆಗೆ ಒತ್ತು -ಅಶ್ವತ್ಥನಾರಾಯಣ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಕೇಂದ್ರಿತವಾಗಿದ್ದು, ಶಿಕ್ಷಣ ಕ್ರಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯ ಗುರಿ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಎನ್‍ಇಪಿ ಜಾರಿ: ಶಿಕ್ಷಣ ಸಂಸ್ಥೆಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು? ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎನ್‍ಇಪಿ ಜಾರಿಗೊಳಿಸಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನೆಲ್ಲ ಕೈಗೊಂಡಿದೆ, ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಶಾಲಾ ಶಿಕ್ಷಣ, ಉನ್ನತ ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಹಾಗೂ ಸುಧಾರಣೆಗಳತ್ತ ಗಮನ ಕೇಂದ್ರೀಕರಿಸಲಾಗಿದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಮಾದರಿ ಕಾಲೇಜುಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಎನ್‍ಇಪಿ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಇನ್ನು 10 ವರ್ಷಗಳಲ್ಲಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯು ಆಧುನೀಕರಣಗೊಳ್ಳಲಿದ್ದು, ವಿದ್ಯಾರ್ಥಿಕೇಂದ್ರಿತವಾಗಲಿದೆ. ಪದವಿ ಮಟ್ಟದಲ್ಲಂತೂ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಯಾವುದೇ ವಿಷಯಗಳನ್ನು ಐಚ್ಛಿಕವಾಗಿ ಓದುವ ಮಾದರಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಇರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕಾಗಿ 21ನೇ ಶತಮಾನದ ಅಗತ್ಯಗಳನ್ನು ಪರಿಗಣಿಸಿ, ಜಾಗತಿಕ ಗುಣಮಟ್ಟದ ಬೋಧನೆಗೆ ಒತ್ತು ನೀಡಿದ್ದೇವೆ ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವಂತೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ಅಸ್ತಿತ್ವಕ್ಕೆ ಬರಲಿದೆ. ಮೂರು ದಶಕಗಳ ನಂತರ ರೂಪಿಸಿರುವ ಈ ನೀತಿಯು ಲಭ್ಯತೆ, ಸಮಾನತೆ, ಗುಣಮಟ್ಟ ಮತ್ತು ಉತ್ತರದಾಯಿತ್ವಗಳನ್ನು ಪ್ರತಿಪಾದಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಿದೆ ಎಂದು ಅವರು ಹೇಳಿದರು.