ಸೆಮಿಕಂಡಕ್ಟರ್ ವಲಯ ಉತ್ತೇಜನಕ್ಕೆ 200 ಎಕರೆ ಭೂಮಿ -ಡಾ.ಅಶ್ವತ್ಥನಾರಾಯಣ

ಬೆಂಗಳೂರು:ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯವನ್ನು  ಉತ್ತೇಜಿಸುವುದಕ್ಕಾಗಿ ಎರಡು ಸಾವಿರ ಕೋಟಿ ರೂ. ಸಬ್ಸಿಡಿ ಕೊಡಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 200 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಐಟಿ, ಬಿಟಿ  ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಭಾರತೀಯ ಎಲೆಕ್ಟ್ರಾನಿಕ್ ಉದ್ಯಮಗಳ ಒಕ್ಕೂಟ ಏರ್ಪಡಿಸಿದ್ದ ಸೆಮಿಕಂಡಕ್ಟರ್ ವಲಯದಲ್ಲಿ ಭಾರತಕ್ಕಿರುವ ಅವಕಾಶಗಳು ಎಂಬ ವೆಬಿನಾರ್ ನಲ್ಲಿ ಅವರು ಮಾತನಾಡಿದರು.

ಸೆಮಿಕಂಡಕ್ಟರ್ ವಲಯದ ಕಂಪನಿಗಳಿಗೆ ಅಗತ್ಯ ಸೌಲಭ್ಯಗಳೊಂದಿಗೆ ಭೂಮಿಯನ್ನು ಒದಗಿಸುವ ಸಂಬಂಧ ಈಗಾಗಲೇ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ದೇಶದ ಸೆಮಿಕಂಡಕ್ಟರ್ ವಲಯದ ಉತ್ಪಾದನೆಯಲ್ಲಿ ಶೇ.64ರಷ್ಟು ರಾಜ್ಯದಲ್ಲೇ ಆಗುತ್ತಿದೆ. ಇದನ್ನು ಮತ್ತಷ್ಟು ಸದೃಢವಾಗಿ ಬೆಳೆಸಲು ಮೈಸೂರಿನಲ್ಲಿ ಈಗಾಗಲೇ ಒಂದು ಉತ್ಪನ್ನಗಳ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಗತ್ಯವೆನಿಸಿದರೆ ಇನ್ನೂ ಕೆಲವೆಡೆ  ಆರಂಭಿಸಲಾಗುವುದು ಎಂದು ತಿಳಿಸಿದರು.

ಜೊತೆಗೆ, ಈ ವಲಯಕ್ಕೇ ಸೀಮಿತವಾದ ಉತ್ಕೃಷ್ಟತಾ ಕೇಂದ್ರಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಕೂಡ ರಾಜ್ಯದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.