ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಅವರ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ಮೋಹನ್ ಬೆಳಿಗ್ಗೆಯಷ್ಟೇ ಮಾಹಿತಿ ನೀಡಿದ್ದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸರ್ಜರಿ ನಡೆಸುವಷ್ಟು ಅವರು ಚೇತರಿಕೆ ಕಂಡಿಲ್ಲ, ಸದ್ಯ ಅವರ ಮಿದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿ ತಲುಪಿದ್ದಾರೆ, ಹೆಚ್ಚುವರಿ ಚಿಕಿತ್ಸೆ ನೀಡಿದರೆ ಅವರ ದೇಹ ಸ್ಪಂದಿಸುತ್ತದೆ ಎಂಬ ಭರವಸೆ ಕಡಿಮೆ ಇದೆ ಎಂದು ತಿಳಿಸಿದ್ದರು.
ಬ್ರೇನ್ ಮಾತ್ರವಲ್ಲದೇ ಹೃದಯಕ್ಕೂ ಸಂಬಂಧಿಸಿದ ವಿಚಾರ ಇದು. ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ, ಬಿಪಿ ಕುಸಿಯುತ್ತಿದೆ ಇದರಿಂದ ಬಹು ಅಂಗಾಂಗಕ್ಕೆ ತೊಂದರೆ ಆಗುತ್ತಿದೆ ಎಂದು ಡಾ. ಮೋಹನ್ ಮಾಹಿತಿ ನೀಡಿದ್ದರು.
ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳ ಪ್ರಾರ್ಥನೆ ಕಡೆಗೂ ಫಲಿಸಲಿಲ್ಲ.
ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ಅಪಾರ ಕೊಡುಗೆ ನೀಡಿದ್ದು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.
ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಕಿರು ತರೆಯಲ್ಲೂ ಅವರು ಛಾಪು ಮೂಡಿಸಿದ್ದಾರೆ. ಅವರು ಬಣ್ಣದ ಲೋಕದಲ್ಲಿ 6 ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದರು. ಶಿವರಾಮಣ್ಣ ಎಂದೇ ಎಲ್ಲರೂ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು.
ಶರಪಂಜರ,ಶುಭಮಂಗಳ, ಎಡಕಲ್ಲು ಗುಡ್ಡದ ಮೇಲೆ, ನಾಗರಹಾವು, ಕರ್ಣ, ಬಂಧನ, ಗಣೇಶ ಸುಬ್ರಹ್ಮಣ್ಯ, ಬಜರಂಗಿ, ಶ್ರಾವಣಬಂತು, ಬಂಗಾರ ಸನ್ ಆಪ್ ಬಂಗಾರದ ಮನುಷ್ಯ ಸೇರಿದಂತೆ ಹಲವಾರು ಚಿತ್ರ ಗಳಲ್ಲಿ ನಟಿಸಿದ್ದಾರೆ.
ಅವರನ್ನು ಕಳೆದುಕೊಂಡು ಕನ್ನಡ ಚಲನಚಿತ್ರರಂಗ ಬಡವಾಗಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು,ರಾಜಕೀಯ ಮುಖಂಡರು, ಚಿತ್ರ ರಂಗದ ಗಣ್ಯರು ನಟ, ನಟಿಯರು, ಅಭಿಮಾನಿಗಳು ಶಿವರಾಂ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

