ಬೆಂಗಳೂರು: 67ನೇ ಫಿಲಂ ಫೇರ್ ಸೌತ್ 2019-21 ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಬಹುಭಾಷಾ ನಟಿ ಪೂಜಾ ಹೆಗ್ಡೆ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಹಾಗೂ ನಟಿ ತಾರಾ ಅನುರಾಧ ಮಾಹಿತಿ ನೀಡಿದರು.
ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಮಾರ್ಚ್ ಮೊದಲವಾರದಲ್ಲಿ ಎರಡು ದಿನಗಳ ಕಾಲ ಈ ಸಮಾರಂಭ ನಡೆಯಲಿದೆ. ಅನೇಕ ಮನೋರಂಜನಾ ಕಾರ್ಯಕ್ರಮಗಳು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮತ್ತಷ್ಟು ಶೃಂಗಾರಗೊಳಿಸಲಿದೆ. ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಜಿತೇಶ್ ಪಿಳ್ಳೈ ತಿಳಿಸಿದರು.
ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ,ಕಳೆದ ಬಾರಿ ಈ ಸಮಾರಂಭ ನಮ್ಮ ಕೈ ತಪ್ಪಿತ್ತು. ನಾವು ಈ ಸಲ ನಮ್ಮ ಊರಿನಲ್ಲೇ ನಡೆಯಬೇಕೆಂದು ಮನವಿ ಮಾಡಿಕೊಂಡೆವು.ಅದಕ್ಕೆ ಅವರು ಸ್ಪಂದಿಸಿದರು.2022ರ ಮಾರ್ಚ್‍ನಲ್ಲಿ ಇದೇ ಮೊದಲ ಬಾರಿಗೆ ಫಿಲಂ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ, ಇದಕ್ಕೆ ಕಮರ್ ಫ್ಯಾಕ್ಟರಿ ಸಹಯೋಗ ನೀಡಲಿದ್ದಾರೆ ಎಂದು ಹೇಳಿದರು.
ಪ್ರತಿಭಾವಂತ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನವಾಗುವ ಮಾಹಾ ವೇದಿಕೆ ಈ ಫಿಲಂ ಫೇರ್ ಪ್ರಶಸ್ತಿ ಸಮಾರಂಭ. 66 ವರ್ಷಗಳ ಬಳಿಕ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ತುಂಬಾ ಸಂತೋಷ. ಯಾವುದೇ ಕೊರತೆ ಬಾರದ ಹಾಗೆ ಸಮಾರಂಭ ಕಮರ್ ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು ನಟಿ ತಾರಾ ಅನುರಾಧ.
ನಾನು ಈ ಫಿಲಂ ಫೇರ್ ನಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಮಂಗಳೂರಿನವಳು. ಆದರೆ ಹುಟ್ಟಿಬೆಳೆದದ್ದು ಮುಂಬೈನಲ್ಲಿ. ನನಗೆ ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ ಎಂದು ನಟಿ ಪೂಜಾ ಹೆಗ್ಡೆ ಹೇಳಿದರು.
ನಾನು ನನ್ನ ತಂದೆ, ತಾಯಿಯೊಂದಿಗೆ ಚಿಕ್ಕವಳಿದ್ದಾಗ ಫಿಲಂ ಫೇರ್ ನೋಡಲು ಹೋಗಿದ್ದೆ. ಪಾಸ್ ಇರಲಿಲ್ಲ. ಹೈದರಾಬಾದ್ ನ ನಮ್ಮ ಕುಟುಂಬದ ಸ್ನೇಹಿತರೊಬ್ಬರು ಪಾಸ್ ವ್ಯವಸ್ಥೆ ಮಾಡಿದ್ದರು. ಈಗ ನಾನೇ ಫಿಲಂ ಫೇರ್ ನಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ಆಗುತ್ತಿದೆ ಅಂದರು.
ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ನಿರ್ಮಾಪಕ ಉಮೇಶ್ ಬಣಕಾರ್, ಶಾಸಕ ಬೈರತಿ ಸುರೇಶ್, ನಟಿಯರಾದ ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಛ ಮತ್ತಿತರರು ಉಪಸ್ಥಿತರಿದ್ದರು.

